52 ಕಂಪೆನಿಗಳೊಂದಿಗೆ ಡಾಟಾ ಹಂಚಿಕೊಂಡ ಫೇಸ್‌ಬುಕ್ !

Update: 2018-07-03 15:23 GMT

ಹೊಸದಿಲ್ಲಿ, ಜು.3: ತಾನು ದತ್ತಾಂಶವನ್ನು ಹಂಚಿಕೆ ಮಾಡುವ 52 ಕಂಪೆನಿಗಳ ವಿವರವನ್ನು ಫೇಸ್‌ಬುಕ್ ಬಹಿರಂಗಪಡಿಸಿದೆ. ಈ ಪೈಕಿ ಭಾರತೀಯ ದೂರಸಂಪರ್ಕ ಸಂಸ್ಥೆ ಏರ್‌ಟೆಲ್ ಮತ್ತು ಹಾಡುಗಳಿಗೆ ಸಂಬಂಧಿಸಿದ ಆ್ಯಪ್ ಸಾವನ್ ಸೇರಿದೆ. 2018ರ ಜೂನ್ 29ರಂದು ಹಸ್ತಾಂತರಿಸಲಾಗಿರುವ ಈ ದಾಖಲೆಯು ಸದ್ಯ ಆನ್‌ಲೈನ್‌ನಲ್ಲಿ ಲಭ್ಯವಿದೆ.

ಗ್ರಾಹಕರ ಅಭಿರುಚಿಯನ್ನು ತಿಳಿಯಲು ಮತ್ತು ಅದರಂತೆ ಅವರ ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳಿಗೆ ಜಾಹೀರಾತುಗಳನ್ನು ಹಾಕಲು ನೆರವಾಗಲು ಈ ಕಂಪೆನಿಗಳು ಫೇಸ್‌ಬುಕ್ ಜೊತೆ ದತ್ತಾಂಶ ಹಂಚಿಕೆ ಒಪ್ಪಂದವನ್ನು ಮಾಡಿಕೊಂಡಿದ್ದವು. ವಿದೇಶಿ ಪತ್ರಿಕೆಯ ವರದಿಯ ಪ್ರಕಾರ, ಫೇಸ್‌ಬುಕ್ ಈ ಹಿಂದೆ ಸ್ಯಾಮ್‌ಸಂಗ್, ಆ್ಯಪಲ್, ಬ್ಲಾಕ್‌ಬೆರಿ ಮತ್ತು ಮೈಕ್ರೊಸಾಫ್ಟ್ ಜೊತೆಗೂ ದತ್ತಾಂಶ ಹಂಚಿಕೆ ಒಪ್ಪಂದ ಮಾಡಿಕೊಂಡಿತ್ತು. ಒಪ್ಪೊ ಮತ್ತು ಲೆನೊವೊ ಕಂಪೆನಿಗಳ ಜೊತೆಗೂ ಒಪ್ಪಂದ ಮಾಡುಕೊಂಡಿರುವುದಾಗಿ ತಿಳಿಸಿದ್ದ ಫೇಸ್‌ಬುಕ್ ಇವೆಲ್ಲವೂ ಕಠಿಣ ನಿಯಂತ್ರಣದಲ್ಲಿರುವ ಒಪ್ಪಂದಗಳಾಗಿದ್ದು ದತ್ತಾಂಶ ದುರುಪಯೋಗಪಡಿಸುವ ಯಾವ ಸಾಧ್ಯತೆಯೂ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಏರ್‌ಟೆಲ್ ಜೊತೆ 2010ರಲ್ಲಿ ಆ್ಯಪ್ ಡೆವೆಲಪರ್ ಆಗಿ ಫೇಸ್‌ಬುಕ್ ಮಾಡಿದ ಒಪ್ಪಂದದಂತೆ ತನ್ನಲ್ಲಿರುವ ದತ್ತಾಂಶವನ್ನು ಪಡೆಯಲು ಒಪ್ಪಿಗೆ ನೀಡಿತ್ತು. 2013ರಲ್ಲಿ ಈ ಆ್ಯಪ್ ಡೆವಲಪ್ ಯೋಜನೆ ಮುಗಿದ ನಂತರ ಫೇಸ್‌ಬುಕ್ ಏರ್‌ಟೆಲ್‌ಗೆ ದತ್ತಾಂಶ ಪಡೆಯುವ ಅನುಮತಿಯನ್ನು ನಿರಾಕರಿಸಿದೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ. ಹಾಡುಗಳನ್ನು ಕೇಳಬಹುದಾದ ಭಾರತೀಯ ಮ್ಯೂಸಿಕ್ ಆ್ಯಪ್ ಸಾವನ್ ಜೊತೆಗೂ ಫೇಸ್‌ಬುಕ್ ದತ್ತಾಂಶ ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಇತ್ತೀಚೆಗೆ ಸಾವನ್ ಆ್ಯಪನ್ನು ರಿಲಾಯನ್ಸ್ ಜಿಯೊ ಜೊತೆ ವಿಲೀನಗೊಳಿಸಲಾಗಿದೆ. ಈ 52 ಕಂಪೆನಿಗಳ ಪೈಕಿ ಫೇಸ್‌ಬುಕ್ ಈಗಾಗಲೇ 38 ಕಂಪೆನಿಗಳ ಜೊತೆ ದತ್ತಾಂಶ ಹಂಚಿಕೆ ಮಾಡುವುದನ್ನು ಸ್ಥಗಿತಗೊಳಿಸಿದೆ. ಜುಲೈ ತಿಂಗಳ ಕೊನೆಯಲ್ಲಿ ಇನ್ನೂ ಏಳು ಕಂಪೆನಿಗಳ ಜೊತೆಗಿನ ಒಪ್ಪಂದವನ್ನು ಸ್ಥಗಿತಗೊಳಿಸಲಿರುವುದಾಗಿ ಫೇಸ್‌ಬುಕ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News