ನನ್ನನ್ನು ಬ್ಲಾಕ್ ಮಾಡಿ ಎಂದ ಟ್ರೋಲ್ ಗೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯಿಸಿದ್ದು ಹೀಗೆ…

Update: 2018-07-03 15:56 GMT

ಹೊಸದಿಲ್ಲಿ, ಜು.3: ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ವಿರುದ್ಧ ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಅವಹೇಳನಕಾರಿ ಟ್ರಾಲ್‌ಗಳು ಮುಂದುವರಿದಿದೆ. ಇದರ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸುತ್ತಿರುವ ಸ್ವರಾಜ್ ಮಂಗಳವಾರದಂದು ಯೂಸರ್ ಒಬ್ಬರನ್ನು ಬ್ಲಾಕ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲದಿನಗಳ ಹಿಂದೆ ಅಂತರ್‌ಧರ್ಮೀಯ ದಂಪತಿಗೆ ಪಾಸ್‌ಪೋರ್ಟ್ ನೀಡುವ ವಿಷಯದಲ್ಲಿ ಟ್ವಿಟರ್‌ನಲ್ಲಿ ಸುಶ್ಮಾ ಸ್ವರಾಜ್ ವಿರುದ್ಧ ಕೀಳಭಿರುಚಿಯ ಪೋಸ್ಟ್‌ಗಳನ್ನು ಹಾಕಲಾಗಿತ್ತು. ಈ ಪೋಸ್ಟ್‌ಗಳಿಗೆ ಸ್ವರಾಜ್ ಸಮರ್ಥವಾಗಿ ತಿರುಗೇಟು ನೀಡಿದ್ದರು. ಆದರೆ ಇಂಥ ಟ್ರಾಲ್‌ಗಳು ಮಂಗಳವಾರವೂ ಮುಂದುವರಿದು ಟ್ವಿಟರ್ ಯೂಸರ್ ಒಬ್ಬರು ತನ್ನನ್ನು ಬ್ಲಾಕ್ ಮಾಡುವಂತೆ ಸ್ವರಾಜ್‌ಗೆ ಸವಾಲು ಹಾಕಿದ್ದರು.

ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಸ್ವರಾಜ್, “ತಡವೇಕೆ? ನೋಡಿ ಆಗಲೇ ಬ್ಲಾಕ್ ಮಾಡಿಯಾಯಿತು” ಎಂದು ಟ್ವೀಟ್ ಮಾಡಿದ್ದರು. ತನ್ನನ್ನು ಟ್ರಾಲ್ ಮಾಡುವವರ ಪೋಸ್ಟ್‌ಗಳನ್ನು ಲೈಕ್ ಮಾಡುವ ಮೂಲಕ ಕೇಂದ್ರ ಸಚಿವೆ ವಿಶಿಷ್ಟ ರೀತಿಯಲ್ಲಿ ಈ ಟ್ರಾಲರ್‌ಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಮಂಗಳವಾರ ಇದೇ ಮೊದಲ ಬಾರಿ ಆಕೆ ಓರ್ವ ಯೂಸರ್‌ನನ್ನು ಬ್ಲಾಕ್ ಮಾಡಿದ್ದಾರೆ. ಇಂಥ ಕೀಳಭಿರುಚಿಯ ಟ್ರಾಲ್‌ಗಳ ಬಗ್ಗೆ ಸ್ವರಾಜ್ ಟ್ವಿಟರ್‌ನಲ್ಲಿ ಜನಾಭಿಪ್ರಾಯವನ್ನೂ ಸಂಗ್ರಹಿಸಿದ್ದರು. ಈ ವೇಳೆ ಶೇ. 57 ಮಂದಿ ತಾವು ಇಂಥ ಪೋಸ್ಟ್‌ಗಳನ್ನು ವಿರೋಧಿಸುತ್ತೇವೆ ಎಂದು ತಿಳಿಸಿದ್ದರೆ ಶೇ. 43 ಯೂಸರ್‌ಗಳು ಇಂಥ ಟ್ರಾಲ್‌ಗಳನ್ನು ಬೆಂಬಲಿಸಿದ್ದರು. ಹಿರಿಯ ಕೇಂದ್ರ ಸಚಿವೆಯನ್ನು ಟ್ವಿಟರ್‌ನಲ್ಲಿ ಈ ರೀತಿ ಅವಹೇಳನ ಮಾಡುವುದನ್ನು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ತೀವ್ರವಾಗಿ ಖಂಡಿಸಿವೆ. ಆದರೆ ಬಿಜೆಪಿ ಮಾತ್ರ ಈ ವಿಷಯದಲ್ಲಿ ಮೌನವಹಿಸಿತ್ತು. ಸೋಮವಾರ ಗೃಹ ಸಚಿವ ರಾಜನಾಥ್ ಸಿಂಗ್ ಮೊದಲ ಬಾರಿ ಈ ಕುರಿತು ಪ್ರತಿಕ್ರಿಯೆ ನೀಡುತ್ತಾ ಹೀಗೆ ಮಾಡುವುದು ತಪ್ಪು ಎಂದು ತಿಳಿಸಿದ್ದರು. ಇದೀಗ ಇನ್ನೊರ್ವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಸ್ವರಾಜ್ ಬೆಂಬಲಿಸಿ ಮಾತನಾಡಿದ್ದು, ಸುಶ್ಮಾರಂಥ ಹಿರಿಯ ರಾಜಕಾರಣಿಯ ಬಗ್ಗೆ ಈ ರೀತಿ ಅವಮಾನಕಾರಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿರುವುದು ದುರದೃಷ್ಟಕರ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News