ಆದೇಶ ಮೀರಿ ಪ್ರತಿಭಟನೆ: ಜೆಎನ್‌ಯು ವಿದ್ಯಾರ್ಥಿ ಸಂಘಟನೆಗೆ ದಂಡ
ಹೊಸದಿಲ್ಲಿ, ಜು.3: ವಿಶ್ವವಿದ್ಯಾಲಯದ ಆಡಳಿತ ಕಟ್ಟಡದ ನೂರು ಮೀಟರ್ ವ್ಯಾಪ್ತಿಯಲ್ಲಿ ಪ್ರತಿಭಟನೆಗಳನ್ನು ನಡೆಸಬಾರದು ಎಂಬ ಕಾನೂನು ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಕಾರಣಕ್ಕಾಗಿ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳಿಗೆ ದಿಲ್ಲಿ ಉಚ್ಚ ನ್ಯಾಯಾಲಯ ದಂಡ ವಿಧಿಸಿದೆ.
ವಿಶ್ವವಿದ್ಯಾಲಯದ ಆಡಳಿತ ಕಟ್ಟಡ ಪ್ರವೇಶಕ್ಕೆ ತಡೆಯೊಡ್ಡ ಬಾರದು ಎಂಬ ಉಚ್ಚ ನ್ಯಾಯಾಲಯದ 2017, ಆಗಸ್ಟ್ 9ರ ಆದೇಶವನ್ನು ಉಲ್ಲಂಘಿಸಿರುವುದರ ವಿರುದ್ಧ ಜೆಎನ್‌ಯು ಆಡಳಿತವು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಆಲಿಸಿದ ನ್ಯಾಯಾಧೀಶ ವಿ.ಕೆ ರಾವ್, ಸಂಘಟನೆಯ ಪ್ರತಿಯೊಬ್ಬ ನಾಯಕ ಮೇಲೆ ತಲಾ 2,000 ರೂ.ದಂಡ ವಿಧಿಸಿ ಆದೇಶ ನೀಡಿದ್ದಾರೆ. ಈ ಮೊತ್ತವನ್ನು ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್‌ನಲ್ಲಿ ಎರಡು ವಾರಗಳ ಒಳಗಾಗಿ ಪಾವತಿಸಬೇಕು ಎಂದು ಅವರು ಆದೇಶಿಸಿದ್ದಾರೆ.
ಈ ವರ್ಷದ ಫೆಬ್ರವರಿ 15ರಂದು ಕಡ್ಡಾಯ ಹಾಜರಾತಿ ನಿಯಮಗಳ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ ಜೆಎನ್‌ಯುಎಸ್‌ಯುನ ಪದಾಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕೇಂದ್ರ ಸರಕಾರದ ಸ್ಥಾಯಿ ಸಲಹೆಗಾರ್ತಿ ಮೋನಿಕಾ ಅರೋರ ಮೂಲಕ ಅರ್ಜಿ ಹಾಕಲಾಗಿತ್ತು.
ಪ್ರತಿಭಟನೆ ಸಮಯದಲ್ಲಿ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಅಪಾಯಕಾರಿ ವಾತಾವರಣವನ್ನು ಸೃಷ್ಟಿಸಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.