×
Ad

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಸಾಕ್ಷಿಗಳ ವಿಚಾರಣೆ: ಜು.6ಕ್ಕೆ ಗುಲಾಬಿ ಶೆಡ್ತಿ ಪಾಟಿಸವಾಲು ಪ್ರಕ್ರಿಯೆ ಮುಂದೂಡಿಕೆ

Update: 2018-07-03 21:58 IST

ಉಡುಪಿ, ಜು.3: ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳ ವಿಚಾರಣಾ ಪ್ರಕ್ರಿಯೆಯು ಎರಡನೆ ದಿನವಾದ ಮಂಗ ಳವಾರವೂ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಮುಂದುವರೆದರೂ, ಆರೋಪಿ ಪರ ವಕೀಲರ ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಾಗಿದ್ದ ಪಾಟಿ ಸವಾಲು ಹಾಗೂ ಹೇಳಿಕೆ ಸಂಗ್ರಹವನ್ನು ಜು.6ಕ್ಕೆ ಮುಂದೂಡಲಾಯಿತು.

ಸೋಮವಾರ ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ದೂರುದಾರರಾದ ಮೃತ ಭಾಸ್ಕರ್ ಶೆಟ್ಟಿಯ ತಾಯಿ ಗುಲಾಬಿ ಶೆಡ್ತಿ ಹೇಳಿಕೆಯನ್ನು ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿ ಬಾಯಿ ಪಡೆದುಕೊಂಡಿದ್ದು ಅವರನ್ನು ಆರೋಪಿ ಪರ ಹಿರಿಯ ವಕೀಲ ಮೈಸೂರಿನ ಅಶ್ವಿನಿ ಕುಮಾರ್ ಜೋಶಿ ಪಾಟಿ ಸವಾಲಿಗೆ ಒಳಪಡಿಸುವ ಪ್ರಕ್ರಿಯೆಯನ್ನು ಮಂಗಳವಾರಕ್ಕೆ ನಿಗದಿಪಡಿಸಲಾಗಿತ್ತು.

ಅಲ್ಲದೆ ಪ್ರಕರಣದ ಮೊದಲ ತನಿಖಾಧಿಕಾರಿಯಾಗಿದ್ದ ಆಗಿನ ಮಣಿಪಾಲ ಪೊಲೀಸ್ ನಿರೀಕ್ಷಕ ಎಸ್.ವಿ.ಗಿರೀಶ್ ಅವರಿಂದ ಸರಕಾರಿ ಅಭಿಯೋಜಕಿ ಸಾಕ್ಷ ಹೇಳಿಕೆ ಪಡೆದುಕೊಳ್ಳುವುದು ಕೂಡ ಮಂಗಳವಾರಕ್ಕೆ ನಿಗದಿಯಾಗಿತ್ತು. ಈ ಮಧ್ಯೆ ಕಣ್ಣಿನ ತೀವ್ರ ತೊಂದರೆಗೆ ಒಳಗಾದ ಹಿರಿಯ ವಕೀಲ ಅಶ್ವಿನಿ ಕುಮಾರ್ ಜೋಶಿ ಪ್ರಕರಣದ ವಾದ ಮಂಡನೆಯಿಂದ ನಿವೃತ್ತಿಗೊಂಡಿದ್ದು ಅವರ ಬದಲು ಮಂಗಳೂರಿನ ವಕೀಲ ನಾರಾಯಣ ಪೂಜಾರಿ ಆರೋಪಿ ಪರ ವಕಲಾತು ವಹಿಸಿಕೊಂಡಿದ್ದರು.

ಇಂದು ನ್ಯಾಯಾಲಯದ ಕಲಾಪ ಆರಂಭಗೊಂಡಾಗ ವಕೀಲ ನಾರಾಯಣ ಪೂಜಾರಿ ಆರೋಪಿ ಪರ ವಕಲಾತು ವಹಿಸಿ, ಗುಲಾಬಿ ಶೆಡ್ತಿಯವರ ಪಾಟಿ ಸವಾಲಿಗೆ ಕಾಲಾವಕಾಶ ನೀಡುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ಇದಕ್ಕೆ ಸರಕಾರಿ ಅಭಿಯೋಜಕಿ ಶಾಂತಿಬಾಯಿ ಆಕ್ಷೇಪಣೆ ಸಲ್ಲಿಸಿದರು. ಈ ವಿಚಾರದಲ್ಲಿ ವಾದ ಪ್ರತಿವಾದಗಳು ನಡೆದವು. ಇದನ್ನು ಆಲಿಸಿದ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ, ಗುಲಾಬಿ ಶೆಡ್ತಿಯ ಪಾಟಿ ಸವಾಲು ಹಾಗೂ ಪೊಲೀಸ್ ಅಧಿಕಾರಿ ಎಸ್.ವಿ.ಗಿರೀಶ್ ಅವರ ಹೇಳಿಕೆ ಪ್ರಕ್ರಿಯೆಯನ್ನು ಜು.6ಕ್ಕೆ ಮುಂದೂಡಿ ಆದೇಶ ನೀಡಿದರು.
  
ಇಂದು ಕೂಡ ತೆರೆದ ನ್ಯಾಯಾಲಯದಲ್ಲಿಯೇ ವಿಚಾರಣೆ ನಡೆದಿದ್ದು ಪ್ರೊಜೆಕ್ಟರ್‌ಗಳನ್ನು ಅಳವಡಿಸಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಹಾಗೂ ನಿರಂಜನ್ ಭಟ್ ಅವರೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಡೆಸಲಾಯಿತು. ನ್ಯಾಯಾಲಯದ ಪ್ರವೇಶ ದ್ವಾರದಲ್ಲಿ ಲೋಹ ಶೋಧಕ ಯಂತ್ರವನ್ನು ಅಳವಡಿಸಿ, ನ್ಯಾಯಾಲಯ ದೊಳಗೆ ವಕೀಲರ ಹೊರತು ಯಾರಿಗೂ ಪ್ರವೇಶ ಕಲ್ಪಿಸಲಿಲ್ಲ. ಭದ್ರತೆಯ ಉಸ್ತು ವಾರಿಯನ್ನು ಉಡುಪಿಯ ಡಿವೈಎಸ್ಪಿ ಕುಮಾರಸ್ವಾಮಿ, ಮಣಿಪಾಲ ಪೊಲೀಸ್ ನಿರೀಕ್ಷಕ ಸುದರ್ಶನ್ ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಂಡಿರುವ ಸಾಕ್ಷನಾಶ ಆರೋಪಿಗಳಾದ ಶ್ರೀನಿವಾಸ ಭಟ್ ಹಾಗೂ ರಾಘವೇಂದ್ರ, ಆರೋಪಿ ವಕೀಲ ರಾದ ಅರುಣ್ ಬಂಗೇರ, ಅರುಣ್ ಕುಮಾರ್ ಶೆಟ್ಟಿ, ವಿಕ್ರಂ ಹೆಗ್ಡೆ, ಎ.ಸಂಜೀವ ಮೊದಲಾದವರು ಉಪಸ್ಥಿತರಿದ್ದರು.

ಇಂದು ನಡೆಯಬೇಕಾಗಿದ್ದ ಪಾಟಿ ಸವಾಲು ಹಾಗೂ ಹೇಳಿಕೆ ಪಡೆಯುವ ಪ್ರಕ್ರಿಯೆ ಜು.6ಕ್ಕೆ ಮುಂದೂಡಿದ ಹಿನ್ನೆಲೆಯಲ್ಲಿ ಈಗಾಗಲೇ ಜು.4, 5 ಮತ್ತು 6ರಂದು ನಿಗದಿಯಾದ ಇತರ ಸಾಕ್ಷಿಗಳ ವಿಚಾರಣೆಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರದ್ದು ಪಡಿಸಿ ಆದೇಶ ನೀಡಿದೆ.

ಮೊದಲ ಹಂತದಲ್ಲಿ ಜು.3ರಿಂದ 6ರವರೆಗೆ ಸಾಕ್ಷಿಗಳ ವಿಚಾರಣೆಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಇದೀಗ ಆರೋಪಿ ಪರ ವಕೀಲರು ಪಾಟಿ ಸವಾಲಿಗೆ ಕಾಲಾವಕಾಶ ಕೇಳಿರುವುದರಿಂದ ಈ ನಡುವಿನ ಮೂರು ದಿನಗಳ ಸಾಕ್ಷಿಗಳ ಹೇಳಿಕೆ ಪಡೆದುಕೊಳ್ಳುವುದನ್ನು ರದ್ದು ಪಡಿಸಲಾಗಿದೆ. ಆದರೆ ಜು.16ರಿಂದ 19ರವರೆಗಿನ ಸಾಕ್ಷಿಗಳ ವಿಚಾರಣೆಯು ಈಗಾಗಲೇ ನಿರ್ಧರಿಸಿದಂತೆ ನಡೆಯಲಿದೆ. ಮುಂದೆ ರದ್ದುಗೊಂಡ ಸಾಕ್ಷಿಗಳ ವಿಚಾರಣೆಗೆ ನಿಗದಿ ಪಡಿಸಿ ಸಮನ್ಸ್ ಜಾರಿಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News