ಒಂದೇ ಕುಟುಂಬದ 11 ಮಂದಿಯ ಸಾಮೂಹಿಕ ಆತ್ಮಹತ್ಯೆ ಪ್ರಕರಣ: ಮತ್ತಷ್ಟು ವಿಚಿತ್ರ, ಕುತೂಹಲಕಾರಿ ಮಾಹಿತಿಗಳು ಬಹಿರಂಗ
ಹೊಸದಿಲ್ಲಿ, ಜು.3: ರಾಜಧಾನಿಯ ಬುರಾರಿ ಪ್ರದೇಶದಲ್ಲಿ ಒಂದೇ ಕುಟುಂಬದ ಹನ್ನೊಂದು ಮಂದಿಯ ಸಾಮೂಹಿಕ ಆತ್ಮಹತ್ಯೆ ಪ್ರಕರಣದಲ್ಲಿ ಪ್ರತಿ ದಿನವೆಂಬಂತೆ ಸ್ವಾರಸ್ಯಕರ ಹಾಗು ವಿಚಿತ್ರ ಮಾಹಿತಿಗಳು ಹೊರ ಬೀಳುತ್ತಿವೆ.
ಮೃತರಲ್ಲಿ ಒಬ್ಬರಾಗಿರುವ ಉದ್ಯಮಿ, 45 ವರ್ಷದ ಲಲಿತ್ ಭಾಟಿಯಾ ಅವರು ತಾವು ಮತ್ತು ತಮ್ಮ ಕುಟುಂಬದ ಇತರ ಹತ್ತು ಮಂದಿಯ ಸಾವಿಗೆ ಮುನ್ನುಡಿ ಬರೆದ ಧಾರ್ಮಿಕ ಪ್ರಕ್ರಿಯೆಯೊಂದರ ನೇತೃತ್ವ ವಹಿಸಿದ್ದರೆಂದು ಪೊಲೀಸರು ಈಗ ಹೇಳುತ್ತಿದ್ದಾರೆ. ಲಲಿತ್ ಸೇರಿದಂತೆ ಕುಟುಂಬದ ಹತ್ತು ಮಂದಿ ಕಬ್ಬಿಣದ ಗ್ರಿಲ್ ಒಂದರಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಹಾಗೂ ಕೈಗಳನ್ನು ಹಿಂದಕ್ಕೆ ಕಟ್ಟಲಾದ ಸ್ಥಿತಿಯಲ್ಲಿ ಕಂಡು ಬಂದಿದ್ದರೆ, 77 ವರ್ಷದ ನಾರಾಯಣಿ ದೇವಿಯ ಮೃತದೇಹ ಇನ್ನೊಂದು ಕೋಣೆಯ ನೆಲದಲ್ಲಿತ್ತು.
ಲಲಿತ್ ಭಾಟಿಯಾರ ಡೈರಿಯಲ್ಲಿ ವರ್ಷಗಳ ಹಿಂದೆ ಸಾವಿಗೀಡಾದ ತಂದೆಯನ್ನು ಕನಸಿನಲ್ಲಿ ಕಾಣುತ್ತಿರುವ ಬಗ್ಗೆ ಹಾಗೂ ಕುಟುಂಬ, ಉದ್ದಿಮೆ ಹಾಗೂ ಆಸ್ತಿ ಸಂಬಂಧಿಸಿದಂತೆ ಅವರಿಂದ ಸೂಚನೆಗಳನ್ನು ಪಡೆಯುತ್ತಿರುವ ಬಗ್ಗೆ ಬರೆದಿದ್ದಾರಲ್ಲದೆ, ತಾನು ಆಚರಿಸುವ ಎಲ್ಲಾ ಪದ್ಧತಿಗಳಿಗೂ 'ಊಪರ್ ಸೇ ಆದೇಶ್' ಎಂದು ಬರೆದಿದ್ದಾರೆ. ಪುಸ್ತಕದಲ್ಲಿರುವ ಅಕ್ಷರಗಳು ಲಲಿತ್ ಅವರ ಕೈಬರಹವನ್ನೇ ಹೋಲುತ್ತವೆಯೆನ್ನಲಾಗಿದ್ದು, ಜನವರಿಯಿಂದೀಚೆಗೆ ಅದರಲ್ಲಿ ಹೆಚ್ಚಿನ ಮಾಹಿತಿ ಬರೆಯಲಾಗಿತ್ತು, ಕೊನೆಯ ಬಾರಿಗೆ ಜೂನ್ 25ರಂದು ಬರೆಯಲಾಗಿತ್ತು. ಕುಟುಂಬ ಹೇಗೆ ಸಾಯಬೇಕೆನ್ನುವ ವಿಚಾರದಲ್ಲಿ ಹಲವಾರು ಬಾರಿ ರಿಹರ್ಸಲ್ ನಡೆಸಿತ್ತು. ಆ ಪುಸ್ತಕದಲ್ಲಿ ಆಲದ ಮರವನ್ನು ಆರಾಧಿಸುವ (ವಾಟ್ ತಪಸ್ಯ) ಬಗ್ಗೆ ಬರೆಯಲಾಗಿತ್ತು ಹಾಗೂ ಅದರ ನೇತಾಡುತ್ತಿರುವ ಬೇರನ್ನು ಆರಾಧಿಸುವ ಬಗ್ಗೆಯೂ ಹೇಳಲಾಗಿತ್ತು.
ಆಲದ ಮರದ ಬೇರುಗಳಂತೆಯೇ ವಾಟ್ ತಪಸ್ಯ ಮಾಡುವವರು ನೇತಾಡಬೇಕೆಂದೂ ಬರೆಯಲಾಗಿದೆ. 'ಚಿಂತನ್ ಕರೋ, ಚಿಂತಾ ಮತ್ ಕರೋ, ಲಲಿತ್ ಆರೋಗ್ಯದ ಬಗ್ಗೆ ಚಿಂತೆ ಬೇಡ ಆದು ನನ್ನ ಭೇಟಿಯಿಂದಾಗಿ' ಎಂದೂ ಬರೆಯಲಾಗಿತ್ತು.
ಕುಟುಂಬ ಸದಸ್ಯರು ಡೆಲ್ಯೂಶನಲ್ ಡಿಸಾರ್ಡರ್ ನಿಂದ ನರಳುತ್ತಿದ್ದಿರಬಹುದು, ಅವರ ಮಾನಸಿಕ ಆರೋಗ್ಯ ಹೇಗಿತ್ತು ಎಂಬ ಬಗ್ಗೆ ತಜ್ಞರಿಂದ ಮಾಹಿತಿ ಸಂಗ್ರಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆ ಮನೆಯಲ್ಲಿ ಪೂರ್ಣಕಾಲಿಕ ಕೆಲಸ ಮಾಡುತ್ತಿದ್ದ ಮೇಸ್ತ್ರಿ ಹಾಗೂ ಒಬ್ಬ ಮನೆಕೆಲಸದಾಳುವಿನ ಪ್ರಕಾರ ಲಲಿತ್ ಕಳೆದ ಮೂರು ತಿಂಗಳುಗಳಿಂದ ಕುತ್ತಿಗೆ ಹಾಗು ಬೆನ್ನು ನೋವಿನಿಂದ ಬಳಲುತ್ತಿದ್ದರು. ಕುಟುಂಬ ಒಂದು ನಿರ್ದಿಷ್ಟ ದೇವರನ್ನು ಪೂಜಿಸುತ್ತಿದ್ದು, ಮನೆಯಲ್ಲಿ ಶಿರ್ಡಿ ಸಾಯಿ ಬಾಬಾ ಫೋಟೋ ಕೂಡ ಇತ್ತು ಎಂದು ಅವರು ಹೇಳುತ್ತಾರೆ.
ಆದರೆ ಮೃತಪಟ್ಟ ಭವೇಶ್ ಮತ್ತು ಲಲಿತ್ ಸೋದರಿ ಸುಜಾತಾ ಮಾತ್ರ ತಮ್ಮ ಸೋದರರಿಗೆ ಯಾವುದೇ ಮಾಂತ್ರಿಕರ ಪರಿಚಯವಿರಲಿಲ್ಲ ಎಂದು ಹೇಳುತ್ತಿದ್ದಾರೆ.