ಮದುವೆ ಮನೆಗೆ ಬೆಂಕಿ ಹಚ್ಚಿದ ಪ್ರಕರಣ: ಅಪರಾಧ ಸಾಬೀತು: ಜು.7ಕ್ಕೆ ಶಿಕ್ಷೆ ಪ್ರಕಟ
ಕುಂದಾಪುರ, ಜು.3: ಮೂರು ವರ್ಷಗಳ ಹಿಂದೆ ತಗ್ಗರ್ಸೆಯ ಅರಳಿಕಟ್ಟೆ ಎಂಬಲ್ಲಿ ಜಾಗದ ವಿವಾದಕ್ಕೆ ಸಂಬಂಧಿಸಿ ಮನೆಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದ ಪ್ರಕರಣದ ಆರೋಪಿಗಳಿಬ್ಬರ ಮೇಲಿನ ಆರೋಪ ಸಾಬೀತಾಗಿರುವುದಾಗಿ ಇಂದು ತೀರ್ಪು ನೀಡಿರುವ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಆರೋಪಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಜು.7ರಂದು ಪ್ರಕಟಿಸುವುದಾಗಿ ತಿಳಿಸಿದೆ.
ಅರಳಿಕಟ್ಟೆಯ ರಾಘವೇಂದ್ರ ಶೆಟ್ಟಿ ಹಾಗೂ ರಾಜೇಂದ್ರ ಶೆಟ್ಟಿ ಶಿಕ್ಷೆಗೆ ಗುರಿ ಯಾಗಿರುವ ಅಪರಾಧಿಗಳು. ಇವರಿಬ್ಬರು ಹಾಗೂ ಅರಳಿಕಟ್ಟೆಯ ಕುಶಲ ಶೆಟ್ಟಿ ಎಂಬವರ ಮಧ್ಯೆ ಹಲವು ವರ್ಷಗಳಿಂದ ಜಾಗದ ತಕರಾರು ನಡೆಯುತ್ತಿತ್ತು. 2015ರ ಎ. 22ರಂದು ಕುಶಲ ಶೆಟ್ಟಿಯವರ ಮಗನ ಮದುವೆ ಹೆಮ್ಮಾಡಿಯ ಸಭಾಭವನದಲ್ಲಿ ನಡೆಯುತ್ತಿತ್ತು.
ಇದೇ ವೇಳೆ ಆರೋಪಿಗಳಿಬ್ಬರು ಅರಳಿಕಟ್ಟೆಯಲ್ಲಿರುವ ಕುಶಲ್ ಶೆಟ್ಟಿ ಅವರ ಮನೆಯ ಬೀಗವನ್ನು ಒಡೆದು ಒಳನುಗ್ಗಿದ ರಾಜು ಶೆಟ್ಟಿ ಹಾಗೂ ರಾಘವೇಂದ್ರ ಶೆಟ್ಟಿ, ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ಟೇಬಲ್, ಮಂಚ ಹಾಗೂ ಇತರ ಸೊತ್ತು ಗಳನ್ನು ಮನೆಯ ಹಾಲ್‌ಗೆ ತಂದು ಹಾಕಿ ಅದಕ್ಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಇದರಿಂದ ಎಲ್ಲವೂ ಸುಟ್ಟು ಹೋಗಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಆಗಿನ ಬೈಂದೂರು ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಒಟ್ಟು 14 ಸಾಕ್ಷಿಗಳ ಪೈಕಿ 12 ಮಂದಿಯ ವಿಚಾರಣೆ ನಡೆಸಿದ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಆರೋಪಿ ಗಳಿಬ್ಬರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದರು. ಜು.7ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿರುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪ್ರಾಸಿಕ್ಯೂಶನ್ ಪರ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು. ಈಗಾಗಲೇ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಆರೋಪಿ ಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.