ಅತ್ಯುತ್ತಮ ಸರಕಾರಿ ವಿವಿ ಸಮೀಕ್ಷೆ: ರಾಜ್ಯಮಟ್ಟದಲ್ಲಿ ಮಂಗಳೂರು ವಿವಿ ಪ್ರಥಮ
Update: 2018-07-03 22:23 IST
ಮಂಗಳೂರು, ಜು.3: ಭಾರತದ ಅತ್ಯುತ್ತಮ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಗುರುತಿಸಲು ಇತ್ತೀಚೆಗೆ ನಡೆಸಲಾಗಿರುವ ಸಮೀಕ್ಷೆಯ ವರದಿಯನ್ನು ಇಂಡಿಯಾ ಟುಡೇ ಪ್ರಕಟಿಸಿದ್ದು ಮಂಗಳೂರು ವಿವಿ ರಾಜ್ಯಮಟ್ಟದಲ್ಲಿ ಅಗ್ರಸ್ಥಾನ ಗಳಿಸಿದೆ.
ಒಟ್ಟು 2,000 ಅಂಕಗಳಲ್ಲಿ 1419 ಅಂಕ ಗಳಿಸುವ ಮೂಲಕ ಮಂಗಳೂರು ವಿವಿ ರಾಷ್ಟ್ರಮಟ್ಟದಲ್ಲಿ 12ನೇ ಸ್ಥಾನ ಗಳಿಸಿದೆ. ಯಶಸ್ಸು ಮತ್ತು ಆಡಳಿತ, ಶೈಕ್ಷಣಿಕ ಮತ್ತು ಸಂಶೋಧನಾ ಉತ್ಕೃಷ್ಠತೆ, ಮೂಲಭೂತ ಸೌಕರ್ಯ, ವ್ಯಕ್ತಿತ್ವ ಮತ್ತು ನಾಯಕತ್ವ ಗುಣ ಅಭಿವೃದ್ಧಿ, ವೃತ್ತಿಯ ಪ್ರಗತಿ ಮತ್ತು ಉದ್ಯೋಗ- ಈ ಮಾನದಂಡಗಳ ಆಧಾರದಲ್ಲಿ ಅಂಕ ನೀಡಲಾಗಿದೆ.
ಯಶಸ್ಸು ಮತ್ತು ಆಡಳಿತ, ಶೈಕ್ಷಣಿಕ ಮತ್ತು ಸಂಶೋಧನಾ ಉತ್ಕೃಷ್ಠತೆ, ಮೂಲಭೂತ ಸೌಕರ್ಯ ವಿಭಾಗಗಳಲ್ಲಿ ಮಂಗಳೂರು ವಿವಿ ಅತ್ಯುತ್ತಮ ಸಾಧನೆ ದಾಖಲಿಸಿದೆ. 2017ರಲ್ಲಿ ‘ಯುಐ ಗ್ರೀನ್ ಮೆಟ್ರಿಕ್’ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಮಂಗಳೂರು ವಿವಿ ರಾಷ್ಟ್ರಮಟ್ಟದಲ್ಲಿ ತೃತೀಯ ರ್ಯಾಂಕ್ ಪಡೆದಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.