ವಾರಂಗಲ್‌ನ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟಕ್ಕೆ ಕನಿಷ್ಠ ಒಂಬತ್ತು ಬಲಿ, ನಾಲ್ವರಿಗೆ ಗಾಯ

Update: 2018-07-04 15:36 GMT

ವಾರಂಗಲ್,ಜು.4: ಇಲ್ಲಿಯ ಗೀಸುಕೊಂಡಾ ಮಂಡಲ ವ್ಯಾಪ್ತಿಯ ಕೀರ್ತಿನಗರದಲ್ಲಿಯ ಭದ್ರಕಾಳಿ ಫೈರ್ ವರ್ಕ್ಸ್‌ನಲ್ಲಿ ಬುಧವಾರ ಭೀಕರ ಸ್ಫೋಟದೊಂದಿಗೆ ಬೆಂಕಿ ಹತ್ತಿಕೊಂಡಿದ್ದು,ಕನಿಷ್ಠ ಒಂಭತ್ತು ಜನರು ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದುರಂತ ಸಂಭವಿಸಿದಾಗ ಫ್ಯಾಕ್ಟರಿಯಲ್ಲಿ 15 ಉದ್ಯೋಗಿಗಳಿದ್ದು,ಇತರ ಮೂವರು ಪಟಾಕಿಗಳ ಖರೀದಿಗೆ ಬಂದಿದ್ದರು. ಪೂರ್ವಾಹ್ನ 11.30ರ ಸುಮಾರಿಗೆ ಸ್ಫೋಟ ಸಂಭವಿಸಿದ್ದು,ಎಂಟು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಐವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಅವಘಡದಿಂದಾಗಿ ಫ್ಯಾಕ್ಟರಿ ಸಂಪೂರ್ಣವಾಗಿ ಕುಸಿದು ಬಿದ್ದು ಭಸ್ಮಗೊಂಡಿದೆ. ಕೆಲವು ಬಲಿಪಶುಗಳ ದೇಹಗಳ ಭಾಗಗಳು ಎಲ್ಲೆಂದರಲ್ಲಿ ಚದುರಿ ಬಿದ್ದಿದ್ದು,ಇತರರ ಶವಗಳು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಕರಕಲಾಗಿವೆ.

ನಿಖರವಾಗಿ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ. ಫ್ಯಾಕ್ಟರಿಯು ಸುಮಾರು 20 ಉದ್ಯೋಗಿಗಳನ್ನು ಹೊಂದಿದ್ದು,10 ಜನರು ಮೃತಪಟ್ಟಿರಬಹುದು ಮತ್ತು ಅವಶೇಷಗಳಡಿ ಇನ್ನೂ ಒಂದೆರಡು ಶವಗಳಿರಬಹುದು ಎಂದು ಜಿಲ್ಲಾಧಿಕಾರಿ ಎಂ.ಹರಿತಾ ತಿಳಿಸಿದರು. ಇದಕ್ಕೂ ಮುನ್ನ 11 ಜನರು ಸತ್ತಿದ್ದಾರೆಂದು ವರದಿಯಾಗಿತ್ತು.

ಫ್ಯಾಕ್ಟರಿಯು ಪರವಾನಿಗೆ ಹೊಂದಿತ್ತೆನ್ನಲಾಗಿದ್ದು,ಮಾಲಿಕ ಗುಣಪಲ್ಲಿ ಕುಮಾರ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತ ಜಿಲ್ಲೆಯಲ್ಲಿ ಪಟಾಕಿಗಳ ಅತ್ಯಂತ ದೊಡ್ಡ ಪೂರೈಕೆದಾರನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದರು.

20 ನಿಮಿಷಗಳವರೆಗೆ ಭಾರೀ ಸ್ಫೋಟಗಳ ಸದ್ದು ಕೇಳಿಸುತ್ತಿದ್ದು,ನಾಲ್ಕು ಅಗ್ನಿಶಾಮಕ ಯಂತ್ರಗಳು ಬೆಂಕಿಯನ್ನು ನಂದಿಸುವಲ್ಲಿ ಸಫಲಗೊಂಡಿವೆ.

ಸರಕಾರವು ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ.ಪರಿಹಾರ ಮತ್ತು ಗಾಯಾಳುಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಲಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಕಡಿಯಂ ಶ್ರೀಹರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News