ಅಧಿಕಾರ ಮೀರಿ ವರ್ತಿಸಿದ್ದ ಅಧಿಕಾರಿ: ಸಚಿವಾಲಯದ ತನಿಖಾ ವರದಿ

Update: 2018-07-04 10:38 GMT

ಲಕ್ನೋ, ಜು. 4: ಇಲ್ಲಿನ ಪಾಸ್ ಪೋರ್ಟ್ ಅಧಿಕಾರಿ ತಮ್ಮನ್ನು ನಿಂದಿಸಿದ್ದಾನೆಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿ ಆರೋಪಿಸಿ ನಂತರ ಮರುದಿನವೇ ತಮ್ಮ ಪಾಸ್ ಪೋರ್ಟ್ ಪಡೆದಿದ್ದ ಅಂತರ್ ಧರ್ಮೀಯ ದಂಪತಿ ತನ್ವಿ ಸೇಠ್ ಹಾಗೂ ಅನಾಸ್ ಸಿದ್ದೀಖಿ ಅವರಿಗೆ ಪಾಸ್ ಪೋರ್ಟ್ ನೀಡುವಾಗ ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ ಹಾಗೂ ದಂಪತಿ ಸಲ್ಲಿಸಿದ್ದ ದಾಖಲೆಗಳೆಲ್ಲವೂ ಸರಿಯಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಡೆಸಿದ ಆಂತರಿಕ ತನಿಖೆಯಿಂದ ತಿಳಿದು ಬಂದಿದೆ.

ಲಕ್ನೋ ಪಾಸ್ ಪೋರ್ಟ್ ಕೇಂದ್ರದ ಅಧಿಕಾರಿ ವಿಕಾಸ್ ಮಿಶ್ರಾ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದರು ಹಾಗೂ ಈಗ ಅವರಿಗೆ ವರ್ಗವಾಗಿರುವ ಗೋರಖಪುರದಲ್ಲೇ ಅವರು ಸೇವೆ ಸಲ್ಲಿಸುತ್ತಾರೆ ಎಂದೂ ವರದಿ ತಿಳಿಸಿದೆ.

ಪಾಸ್ ಪೋರ್ಟ್ ಅರ್ಜಿ ಸಲ್ಲಿಸಿದ್ದ ದಂಪತಿ ಎಲ್ಲಾ ನಿಯಮಗಳನ್ನು ಪಾಲಿಸಿದ್ದಾರೆ ಎಂದು ವರದಿ ಸ್ಪಷ್ಟ ಪಡಿಸಿದೆಯಲ್ಲದೆ ಪಾಸ್ ಪೋರ್ಟ್ ಗಾಗಿ ವಿವಾಹ ಪ್ರಮಾಣಪತ್ರ ಅಗತ್ಯವಿಲ್ಲ, ದಂಪತಿ ಸಲ್ಲಿಸಿದ್ದ ಇತರ ದಾಖಲೆಗಳು ಪಾಸ್ ಪೋರ್ಟ್ ನೀಡಲು ಸಾಕಾಗಿತ್ತು ಎಂದೂ ವರದಿ ತಿಳಿಸಿದೆ.

ದಂಪತಿ ತಮ್ಮ ದಾಖಲೆಗಳಲ್ಲಿ ನೀಡಿದ ವಿಳಾಸ ಸರಿಯಿಲ್ಲ ಎಂದು ಪಾಸ್ ಪೋರ್ಟ್ ಅಧಿಕಾರಿ ಆಕ್ಷೇಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಅಂತರ್ ಧರ್ಮೀಯ ದಂಪತಿಗೆ ಪಾಸ್ ಪೋರ್ಟ್ ನೀಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುಷ್ಮಾ ಸ್ವರಾಜ್ ತಮ್ಮದೇ ಪಕ್ಷದ ಬೆಂಬಲಿಗರಿಂದ ಟ್ರೋಲ್ ಗೊಳಗಾಗಿರುವುದೂ ಭಾರೀ ಸುದ್ದಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News