ವೈದ್ಯರ ಮಾನಸಿಕ ಒತ್ತಡ ನಿವಾರಣೆಗೆ ಯೋಗದ ಮೊರೆಹೋದ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್!

Update: 2018-07-04 14:03 GMT

ಮಂಗಳೂರು, ಜು.4: ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಎದುರಿಸುತ್ತಿರುವ ಮಾನಸಿಕ ಒತ್ತಡವನ್ನು ದೂರ ಮಾಡಲು ಯೋಗ ಆಧಾರಿತ ಕಾರ್ಯಾಗಾರವನ್ನು ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ಆಯೋಜಿಸಲಾಗಿದ್ದು, ಈ ಬಗ್ಗೆ ನಗರದ ಹಿರಿಯ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲಾಯ, ಡಾ. ನರೇಂದ್ರ ನಾಯಕ್, ಕೆ.ಎಸ್. ಮಾಧವ ರಾವ್, ಬೆಂಗಳೂರಿನ ಡಾ. ಶಶಿಧರ ಬಿಳಗಿ, ಪಿ., ಉಡುಪಿಯ ಹಿರಿಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ, ಡಾ.ರವಿಚಂದ್ರ ಕಾರ್ಕಳ, ಮಂಗಳೂರಿನ ಡಾ.ಸಂತೋಷ್ ಪ್ರಭು ಹಾಗು ಡಾ.ರಕ್ಷಿತ್ ಕೆಡಂಬಾಡಿ, ಬಳ್ಳಾರಿಯ ಡಾ.ಯೋಗಾನಂದ ರೆಡ್ಡಿ, ಬೆಂಗಳೂರಿನ ಡಾ. ಪ್ರಕಾಶ್ ಸಿ. ರಾವ್ ಸೇರಿದಂತೆ ಹಲವು ವೈದ್ಯರಿಂದ ಆಕ್ಷೇಪ ವ್ಯಕ್ತವಾಗಿದೆ.

ಈ ಬಗ್ಗೆ ವೈದ್ಯರ ತಂಡವೊಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಿಗೆ ಬಹಿರಂಗ ಪತ್ರದ ಮೂಲಕ ಆಕ್ಷೇಪಗಳನ್ನು ಕೂಡಾ ವ್ಯಕ್ತಪಡಿಸಿದೆ.

"ಭಾರತೀಯ ವೈದ್ಯಕೀಯ ಸಂಘವು ಸಾಕ್ಷಿ ಆಧಾರಿತ ವೃತ್ತಿಪರ ವೈದ್ಯರನ್ನು ಒಳಗೊಂಡ ಸಂಘವಾಗಿದೆ. ವೃತ್ತಿಗೆ ಸಂಬಂಧಿಸಿ ಕೆಲವೊಂದು ಅಪವಾದಗಳು ಎದ್ದಾಗ ಸಂಘವು ಅದರ ವಿರುದ್ಧ ಸಂಘಟಿತ ಹೋರಾಟವನ್ನು ನಡೆಸಿದೆ. ಆದರೆ ಇದೀಗ ವೈದ್ಯಕೀಯ ಕ್ಷೇತ್ರದಲ್ಲಿ ಅರ್ಹತೆ ಅಥವಾ ಮನ್ನಣೆಯನ್ನು ಹೊಂದಿಲ್ಲದ ಸಂಸ್ಥೆಗಳಿಂದ ಕಾರ್ಯಾಗಾರವನ್ನು ಐಎಂಎಯಂತಹ ವೈದ್ಯರ ಸಂಘಟನೆ ನಡೆಸುತ್ತಿರುವ ಬಗ್ಗೆ ಆಕ್ಷೇಪವಿದೆ. ವೈದ್ಯಕೀಯ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸಲು ಇಂತಹವರನ್ನು ಆಹ್ವಾನಿಸುವುದೆಂದರೆ ಐಎಂಎ ಸಂಘದಲ್ಲಿ ಯಾವುದೇ ಸಂಪನ್ಮೂಲಗಳಿಲ್ಲ ಎಂಬುದನ್ನು ಸೂಚಿಸಿದಂತಾಗುತ್ತದೆ. ಹಾಗಿದ್ದಲ್ಲಿ, ಸಂಘವನ್ನು ಬರ್ಕಾಸ್ತುಗೊಳಿಸಿ ನಿಮ್ಮ ವೈದ್ಯಕೀಯ ಪದ್ಧತಿಯನ್ನು ಆಧ್ಮಾತ್ಮಿಕ ಗುರುಗಳೆಂದು ಕರೆಸಿಕೊಳ್ಳುವವರಿಗೆ ಹಸ್ತಾಂತರಿಸುವುದು ಸೂಕ್ತ" ಎಂದು ಭಾರತೀಯ ವಿಚಾರವಾದಿಗಳ ಸಂಘದ ಅಧ್ಯಕ್ಷ ಡಾ.ನರೇಂದ್ರ ನಾಯಕ್ ಐಎಂಎಯನ್ನು ಉಲ್ಲೇಖಿಸಿ ಅಭಿಪ್ರಾಯಿಸಿದ್ದಾರೆ.

"ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಆತ್ಮಹತ್ಯೆಯಂತಹ ಪ್ರಕ್ರಿಯೆಗಳಲ್ಲಿ ತೊಡಗಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಮಾನಸಿಕ ಒತ್ತಡವನ್ನು ಕಡಿಮೆಗೊಳಿಸುವ ಸಲುವಾಗಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತಿರುವುದಾಗಿ ಐಎಂಎ ಹೇಳಿಕೊಂಡಿದೆ. ವಿಶೇಷವೆಂದರೆ, ಈ ಕಾರ್ಯಾಗಾರಕ್ಕೆ ಇಶಾ ಯೋಗ ಫೌಂಡೇಶನ್, ಬಂಜಾರಾ ಫೌಂಡೇಶನ್‌ನ ತಜ್ಞರನ್ನು ಕರೆಸಲಾಗಿದೆ".

"ಭಾರತೀಯ ವೈದ್ಯಕೀಯ ಸಂಘವು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಪ್ರವೃತ್ತಿಯನ್ನು ಕಡಿಮೆ ಮಾಡಲು ಈ ಒಂದು ಕಾರ್ಯಾಗಾರವನ್ನು ಪ್ರಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ನಡೆಸುತ್ತಿರುವುದನ್ನು ತಿಳಿದು ಆಶ್ಚರ್ಯವಾಗಿದೆ. ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಈಶಾ ಯೋಗ ,ಆರ್ಟ್ ಆಫ್ ಲಿವಿಂಗ್, ಲಾಫ್ಟರ್ ಯೋಗ ಮತ್ತು ಸ್ಟ್ಯಾಂಡಪ್ ಕಾಮಿಡಿ ಮತ್ತು ನಗುವಿನ ಬಗ್ಗೆ ಇಬ್ಬರು ವೈದ್ಯರು ಮಾತನಾಡಲಿದ್ದಾರೆ. ಕಾರ್ಯಕ್ರಮದ ಪ್ರಸ್ತಾವನೆಯನ್ನು ಮಾನಸಿಕ ಆರೋಗ್ಯ ತಜ್ಞ, ನಮ್ಮ ಮನೋವೈದ್ಯಕೀಯ ಸಂಘದ ಅಧ್ಯಕ್ಷ ಅಜಿತ್ ಭಿಡೆ ಮಾಡಲಿದ್ದಾರೆ. ಆದರೆ ಎಲ್ಲಿಯೂ ಕೂಡ ಆಧುನಿಕ ವೈದ್ಯಕೀಯ ಪದ್ಧತಿಯ ಸಾಕ್ಷಾಧಾರಿತ ತಂತ್ರಗಳು, ಆಧುನಿಕ ವೈಜ್ಞಾನಿಕ ಸಂಶೋಧನೆಗಳು ತಿಳಿಸಿರುವ ಕೆಲವು ಒತ್ತಡ ನಿವಾರಕ ವಿಷಯಗಳು, ಜೀವನ ಶೈಲಿ ನಿರ್ವಹಣೆ ಬಗ್ಗೆ ಮಾತನಾಡಲು ಯಾವ ವೈದ್ಯರೂ ಇಲ್ಲ ಎಂಬುದು ಅಚ್ಚರಿ ಮೂಡಿಸಿದೆ" ಎಂದು ಉಡುಪಿಯ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಅಭಿಪ್ರಾಯಿಸಿದ್ದಾರೆ.

‘‘ನಮ್ಮ ವೈದ್ಯಕೀಯ ವಿದ್ಯಾರ್ಥಿಗಳಿಗೆ ನಾವು ಮೊದಲು ನಮ್ಮ ಸಿಸ್ಟಂನಲ್ಲಿ ಲಭ್ಯವಿರುವ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ನೀಡದೆ ಕೇವಲ ಯಾರನ್ನೋ ಖುಷಿ ಪಡಿಸುವುದಕ್ಕಾಗಿ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸುವುದಕ್ಕೆ ನನ್ನ ವಿರೋಧವಿದೆ . ಆತ್ಮಹತ್ಯೆ ಇನ್ನೂ ಕಡಿಮೆ ಮಾಡಬೇಕಾದರೆ ಮೊದಲು ಮಾನಸಿಕ ಕಾಯಿಲೆಗಳನ್ನು ಸರಿಯಾಗಿ ಗುರುತಿಸುವುದು ಅತಿ ಅಗತ್ಯ ಮತ್ತು ವೈಜ್ಞಾನಿಕ ಚಿಕಿತ್ಸೆ, ಮನೋವೈದ್ಯಕೀಯ ಕೌನ್ಸೆಲಿಂಗ್ ಇರಬಹುದು, ಅಗತ್ಯ ಖಿನ್ನತೆ ನಿವಾರಕ ಮಾತ್ರೆ ಅಥವಾ ಇಲೆಕ್ಟ್ರೋ ಕನ್ವಾಲ್ಸಿವ ತೆರಪಿ ಇರಬಹುದು ಇದು ಬಹಳ ಮುಖ್ಯ" ಎಂದು ಡಾ. ಭಂಡಾರಿ ಹೇಳಿದ್ದಾರೆ.

ವೈದ್ಯರಲ್ಲಿ ಒತ್ತಡ ಕಡಿಮೆ ಮಾಡಬೇಕಾದರೆ ಒತ್ತಡ ನಿವಾರಣಾ ತಂತ್ರಗಳನ್ನು ತಿಳಿಸುವ ಸುತ್ತೋಲೆ ಹಾಗೂ ಪ್ರತ್ಯೇಕ ಘಟಕವೊಂದನ್ನು ಭಾರತೀಯ ವೈದ್ಯಕೀಯ ಸಂಘ ನಡೆಸಬೇಕು. ಒತ್ತಡದಿಂದ ಕೆಲಸ ಮಾಡುತ್ತಿರುವ ವೈದ್ಯರಿಗೆ ಆಗಾಗ ವೈಜ್ಞಾನಿಕ ಕಾರ್ಯಕ್ರಮಗಳನ್ನು ನಡೆಸಲಿಕ್ಕೆ ಹೊರತು ಈ ತರದ ಕಾರ್ಯಕ್ರಮವನ್ನು ಅಲ್ಲ. ಹಿಂದೆ ಯೋಗ ಪ್ರಾಣಾಯಾಮದ ಬಗ್ಗೆ ಸಾಕಷ್ಟು ಒಲವು ಇಟ್ಟುಕೊಂಡು ನಾನು ಇದರ ಬಗ್ಗೆ ನಮ್ಮ ಆಸ್ಪತ್ರೆ ಮತ್ತು ಕೆಎಂಸಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಹಲವಾರು ಸಂಶೋಧನೆಗಳನ್ನು ಗಮನಿಸಿದ್ದೇನೆ. ಯೋಗ ಪ್ರಾಣಾಯಾಮ ಒಂದು ಪರ್ಯಾಯ ಚಿಕಿತ್ಸೆ ಹೊರತು ಇದನ್ನೇ ಪ್ರಮುಖವಾಗಿ ಯಾವುದೇ ವೈದ್ಯಕೀಯ ಕಾಯಿಲೆಗಳ ಚಿಕಿತ್ಸೆ ಎಂದು ಬಳಸಲು ಆಗುವುದಿಲ್ಲ. ಒತ್ತಡ ಕಡಿಮೆ ಮಾಡುವುದಕ್ಕೆ ಯೋಗ ಅಥವಾ ಮೇಲೆ ತಿಳಿಸಿದ ಯಾವುದೇ ಯೋಗಗಳು ಅಂತಾರಾಷ್ಟ್ರೀಯ ಮಟ್ಟದ ಸಾಕ್ಷಾಧಾರಿತ ಪರಿಣಾಮಗಳನ್ನು ಹೊಂದಿದೆ ಎಂದು ಹೇಳಲು ಆಗುವುದಿಲ್ಲ. ರಾಷ್ಟ್ರ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಭಾರತೀಯ ವೈದ್ಯಕೀಯ ಸಂಘ ಮಾಡುವಾಗ ಸ್ವಲ್ಪ ಜಾಗರೂಕತೆಯಿಂದ ಇರಬೇಕು ಎನ್ನುವುದು ನನ್ನ ಅನಿಸಿಕೆ. ಪರ್ಯಾಯ ವೈದ್ಯಕೀಯ ಪದ್ಧತಿಗಳನ್ನು ನಾನು ದೂಷಿಸುವುದಿಲ್ಲ. ನನ್ನ ರೋಗಿಯೊಬ್ಬ ಅದನ್ನು ಉಪಯೋಗಿಸುತ್ತೇನೆ ಎಂದರೆ ಇಷ್ಟರವರೆಗೆ ನಾನು ಬೇಡ ಎಂದು ಹೇಳಿಲ್ಲ. ಆದರೆ ದೇಶದ ವೈದ್ಯರನ್ನ ಪ್ರತಿನಿಧಿಸುವ ಭಾರತೀಯ ವೈದ್ಯಕೀಯ ಸಂಘ ಕೇವಲ ಆಳುವವರನ್ನು ಖುಷಿಪಡಿಸಲು ಇಂತಹ ಒಂದು ಕಾರ್ಯಕ್ರಮವನ್ನು ಮಾಡುತ್ತಾ ಇರುವುದು ಖೇದಕರ" ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News