ಕಾರಿಂಜ: ಈಶ್ವರ ದೇವಾಲಯ ಕಾಣಿಕೆ ಡಬ್ಬಿಯಿಂದ ಹಣ ಕಳವು
ಬಂಟ್ವಾಳ, ಜು. 4: ಕಾವಳಮೂಡೂರು ಗ್ರಾಮದ ಪುರಾಣ ಪ್ರಸಿದ್ಧ ಕಾರಿಂಜ ಶ್ರೀ ಮಹತೋಭಾರ ಕಾರಿಂಜೇಶ್ವರ ದೇವಸ್ಥಾನದ ಶ್ರೀಈಶ್ವರ ಸನ್ನಿಧಿಗೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿಯಿಂದ ಹಣ ಎಗರಿಸಿ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಪಾರ್ವತಿ-ಪರಮೇಶ್ವರ ದೇವಸ್ಥಾನಗಳ ಪೈಕಿ ಎತ್ತರ ಬೆಟ್ಟದ ಮೇಲಿರುವ ಈಶ್ವರ ದೇವಸ್ಥಾನದ ಎದುರು ಅಳವಡಿಸಲಾಗಿದ್ದ ಮೂರು ಕಾಣಿಕೆ ಡಬ್ಬಿಗಳ ಪೈಕಿ ತಾಮ್ರದ ಒಂದು ಡಬ್ಬಿ ಒಡೆದು ಅದರೊಳಗಿದ್ದ ಸುಮಾರು ಐದಾರು ಸಾವಿರ ರೂ. ಮೊತ್ತದ ಹಣ ಎಗರಿಸಿ ಕಳ್ಳರು ಪರಾರಿಯಾಗಿದ್ದಾರೆ. ರವಿವಾರ ತಡರಾತ್ರಿ ಅಥವಾ ಸೋಮವಾರ ಮುಂಜಾನೆ ಈ ಕಳವು ನಡೆದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಸೋಮವಾರ ಬೆಳಗ್ಗೆ ಅರ್ಚಕರ ಸಹಾಯಕರಿಗೆ ಕಾಣಿಕೆ ಡಬ್ಬಿ ಒಡೆದ ವಿಚಾರ ಗಮನಕ್ಕೆ ಬಂದಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಈ ದೇವಸ್ಥಾನದಲ್ಲಿ ಮೂರು ಸಿಸಿ ಕೆಮರಾಗಳಿದ್ದು, ಅದರಲ್ಲಿ ಎರಡು ಕೆಮರಾ ಕೆಟ್ಟು ಹೋಗಿದ್ದು, ಎರಡು ದಿನಗಳ ಹಿಂದಷ್ಟೆ ದುರಸ್ತಿಗೆ ಕಳುಹಿಸಲಾಗಿತ್ತು. ಉಳಿದ ಒಂದು ಸಿಸಿ ಕೆಮರಾದಲ್ಲಿ ಕಳ್ಳರ ಚಲನವಲನ ದಾಖಲಾಗಿದ್ದು, ದೃಶ್ಯಾವಳಿ ವೀಕ್ಷಿಸಿದ ಬಳಿಕ ಹೆಚ್ಚಿನ ಚಿತ್ರಣ ಸಿಗಲಿದೆ ಎಂದು ಪುಂಜಾಲಕಟ್ಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.
ರಾತ್ರಿ ದೇವಸ್ಥಾನದ ಮುಖ್ಯದ್ವಾರ ಹಾಗೂ ಕೆಳಗಿನ ದ್ವಾರ ಮುಚ್ಚಲಾಗಿತ್ತು. ಬಳಿಯಲ್ಲೇ ಇರುವ ಉಕ್ಕುಡಕಲ್ಲು ವೈರ್‌ಲೆಸ್ ಕೇಂದ್ರದಲ್ಲಿ ಪ್ರತಿದಿನ ರಾತ್ರಿ ಇಬ್ಬರು ಪೊಲೀಸ್ ಸಿಬ್ಬಂದಿ ಇದ್ದರೂ ಕಳ್ಳರು ಅಡ್ಡದಾರಿಯಲ್ಲಿ ಒಳಪ್ರವೇಶಿಸಿರುವುದು ಅಚ್ಚರಿ ಉಂಟು ಮಾಡಿದೆ ಎಂದು ದೇವಸ್ಥಾನದ ವ್ಯವಸ್ಥಾಪಕರು ತಿಳಿಸಿದ್ದಾರೆ.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ದೇವಸ್ಥಾನದ ಪಾಟಾಳಿ ಶಿವಪ್ರಸಾದ್ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.