ಹೆಚ್ಚುವರಿ ತೈಲ ಉತ್ಪಾದನೆ ಸಾಮರ್ಥ್ಯ ಬಳಸಲು ಸಿದ್ಧ: ಸೌದಿ ಅರೇಬಿಯ

Update: 2018-07-04 15:41 GMT

ಲಂಡನ್, ಜು. ೪: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ತನ್ನ ಹೆಚ್ಚುವರಿ ಉತ್ಪಾದನೆ ಸಾಮರ್ಥ್ಯವನ್ನು ಬಳಸಲು ಸೌದಿ ಅರೇಬಿಯ ಸಿದ್ಧವಿದೆ ಎಂದು ಸಚಿವ ಸಂಪುಟದ ಹೇಳಿಕೆಯೊಂದು ಮಂಗಳವಾರ ತಿಳಿಸಿದೆ.

ಸೌದಿ ಅರೇಬಿಯ ಸದ್ಯ ದಿನಕ್ಕೆ ಸುಮಾರು ೧ ಕೋಟಿ ಬ್ಯಾರಲ್ ತೈಲವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ. ಜೊತೆಗೆ, ಅಗಾಧ ಹೆಚ್ಚುವರಿ ಉತ್ಪಾದನೆ ಸಾಮರ್ಥ್ಯವನ್ನೂ ಹೊಂದಿದೆ. ಅದೂ ಅಲ್ಲದೆ, ಮಾರುಕಟ್ಟೆಗೆ ಗಣನೀಯ ಪ್ರಮಾಣದಲ್ಲಿ ತೈಲ ಪೂರೈಕೆ ಮಾಡಬಲ್ಲ ಜಗತ್ತಿನ ಏಕೈಕ ದೇಶ ಅದಾಗಿದೆ.

‘‘ಭವಿಷ್ಯದಲ್ಲಿ ತೈಲ ಪೂರೈಕೆ ಮತ್ತು ಬೇಡಿಕೆ ಪ್ರಮಾಣದಲ್ಲಿ ಆಗಬಹುದಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಇತರ ಉತ್ಪಾದಕ ದೇಶಗಳೊಂದಿಗೆ ಸಮನ್ವಯತೆಯೊಂದಿಗೆ ತನ್ನ ಹೆಚ್ಚುವರಿ ಉತ್ಪಾದನಾ ಸಾಮರ್ಥ್ಯವನ್ನು ಬಳಸಲು ಸೌದಿ ಅರೇಬಿಯ ಸಿದ್ಧವಾಗಿರುವುದನ್ನು ಸಚಿವ ಸಂಪುಟ ದೃಢಪಡಿಸಿದೆ’’ ಎಂದು ಸೌದಿ ಪ್ರೆಸ್ ಏಜನ್ಸಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ಜಾಗತಿಕ ತೈಲ ಬೆಲೆಯನ್ನು ಕಡಿಮೆಗೊಳಿಸುವುದಕ್ಕಾಗಿ ತೈಲ ಉತ್ಪಾದನೆಯನ್ನು ಹೆಚ್ಚಿಸಲು ಸೌದಿ ಅರೇಬಿಯ ಒಪ್ಪಿಕೊಂಡಿದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಟ್ವೀಟ್ ಮಾಡಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News