ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ವಿಶೇಷ ಪಿಪಿಯಾಗಿ ಶಾಂತಾರಾಮ್ ಶೆಟ್ಟಿ ಮುಂದುವರಿಕೆ
ಉಡುಪಿ, ಜು.4: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕರಾಗಿ ಉಡುಪಿಯ ನ್ಯಾಯವಾದಿ ಶಾಂತಾರಾಮ್ ಶೆಟ್ಟಿ ಅವರ ಮುಂದುವರಿಕೆಗೆ ರಾಜ್ಯ ಹೈಕೋರ್ಟ್ ಇಂದು ಹಸಿರು ನಿಶಾನೆ ತೋರಿಸಿದೆ.
ವಿಶೇಷ ಸರಕಾರಿ ಅಭಿಯೋಜಕರ ನೇಮಕವನ್ನು ಪ್ರಶ್ನಿಸಿ ಪ್ರಮುಖ ಆರೋಪಿ ರಾಜೇಶ್ವರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಅರವಿಂದ ಕುಮಾರ್ ಇಂದು ಅಪರಾಹ್ನ 2:30ರ ಸುಮಾರಿಗೆ ತಿರಸ್ಕೃತಗೊಳಿಸಿದ್ದು, ಈ ಮೂಲಕ ಶಾಂತಾರಾಮ್ ಶೆಟ್ಟಿ ಅವರನ್ನು ನೇಮಕ ಮಾಡಿರುವ ರಾಜ್ಯ ಸರಕಾರ ಆದೇಶವನ್ನು ಎತ್ತಿ ಹಿಡಿದಿದ್ದಾರೆ.
ಹೈಕೋರ್ಟ್ ಆದೇಶದಂತೆ ಇನ್ನು ಮುಂದೆ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ವಾದ ಮಂಡನೆಯನ್ನು ರಾಜ್ಯ ಸರಕಾರ ನೇಮಿಸಿದ ವಿಶೇಷ ಸರಕಾರಿ ಅಭಿಯೋಜಕ ಶಾಂತಾರಾಮ್ ಶೆಟ್ಟಿ ಮುಂದುವರಿಸಲಿರುವರು ಎಂದು ಶಾಂತಾರಾಮ್ ಶೆಟ್ಟಿ ಪರ ಹೈಕೋರ್ಟ್ ವಕೀಲ ಸುದೇಶ್ ಕುಮಾರ್ ಆಚಾರ್ಯ ತಿಳಿಸಿದ್ದಾರೆ.
ಪ್ರಕರಣದ ದೂರುದಾರರಾದ ಗುಲಾಬಿ ಶೆಡ್ತಿಯ ಪರ ಹಿರಿಯ ಹೈಕೋರ್ಟ್ ವಕೀಲ ಅಶೋಕ್ ಹಾರ್ನಳ್ಳಿ, ಬಿ.ಎನ್.ಜಗದೀಶ್, ಸರಕಾರದ ಪರವಾಗಿ ಹೆಚ್ಚು ವರಿ ಅಡ್ವಕೇಟ್ ಜನರಲ್ ಎ.ಎಸ್.ಪೊನ್ನಣ್ಣ ವಾದಿಸಿದ್ದರು. ಹಾಗಾಗಿ ಈ ತಿಂಗಳ 6ರಂದು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುವ ಪ್ರಕರಣದ ಸಾಕ್ಷಿ ಹಾಗೂ ಮೊದಲ ತನಿಖಾಧಿಕಾರಿ ಎಸ್.ವಿ.ಗಿರೀಶ್ ಸಾಕ್ಷ ಹೇಳಿಕೆಯನ್ನು ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಿಬಾಯಿ ಬದಲು ವಿಶೇಷ ಸರಕಾರಿ ಅಭಿಯೋಜಕ ಶಾಂತಾರಾಮ್ ಶೆಟ್ಟಿ ಪಡೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನೆಲೆ: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ವಿಶೇಷ ಅಭಿ ಯೋಜಕರಾಗಿ ಶಾಂತರಾಮ್ ಶೆಟ್ಟಿ ಅವರನ್ನು ರಾಜ್ಯ ಸರಕಾರ 2016ರ ಅ.26ರಂದು ನೇಮಕ ಮಾಡಿತ್ತು. ಈ ಆದೇಶದ ವಿರುದ್ಧ ಪ್ರಕರಣದ ಆರೋಪಿ ರಾಜೇಶ್ವರಿ ಶೆಟ್ಟಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿತ್ತು. ಈ ತಡೆಯಾಜ್ಞೆ ತೆರವುಗೊಳಿಸುವಂತೆ ಭಾಸ್ಕರ್ ಶೆಟ್ಟಿ ತಾಯಿ ಗುಲಾಬಿ ಶೆಡ್ತಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ 2018ರ ಜ.31ರಂದು ತಡೆಯಾಜ್ಞೆಯನ್ನು ತೆರವುಗೊಳಿಸಿ ಈ ಬಗ್ಗೆ ಅಕ್ಷೇಪ ಗಳಿದ್ದರೆ ಸರಕಾರಕ್ಕೆ ಸಲ್ಲಿಸುವಂತೆ ರಾಜೇಶ್ವರಿ ಶೆಟ್ಟಿಗೆ ಸೂಚಿಸಿತು.
ಅದರಂತೆ ರಾಜೇಶ್ವರಿ ಶೆಟ್ಟಿ ವಿಶೇಷ ಅಭಿಯೋಜಕರ ನೇಮಕ ಕುರಿತ ಆಕ್ಷೇಪಣೆಯನ್ನು ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯ ಗೃಹ ಕಾರ್ಯದರ್ಶಿಗೆ ಸಲ್ಲಿಸಿ ದ್ದರು. ಈ ಆಕ್ಷೇಪಣೆಗೆ ಪ್ರತಿಯಾಗಿ ಗುಲಾಬಿ ಶೆಡ್ತಿ ತನ್ನ ಆಕ್ಷೇಪಣೆಯನ್ನು ಫೆ.22ರಂದು ಸಲ್ಲಿಸಿದ್ದರು. ರಾಜೇಶ್ವರಿ ಶೆಟ್ಟಿಯ ಅರ್ಜಿಯನ್ನು ತಿರಸ್ಕರಿಸಿದ ಗೃಹ ಇಲಾಖೆಯು ಶಾಂತಾರಾಮ್ ಶೆಟ್ಟಿ ಅವರನ್ನು ವಿಶೇಷ ಅಭಿಯೋಜಕರಾಗಿ ಮುಂದುವರೆಸಿ ಆದೇಶ ನೀಡಿತು.
ಶಾಂತಾರಾಮ್ ಶೆಟ್ಟಿ ಅವರನ್ನು ವಿಶೇಷ ಅಭಿಯೋಜಕರಾಗಿ ಮುಂದುವರೆ ಸುವ ಆದೇಶ ನೀಡುವ ಮೊದಲು ಗೃಹ ಇಲಾಖೆ ನನ್ನ ಆಕ್ಷೇಪಣೆಯನ್ನು ಸರಿ ಯಾಗಿ ಪರಿಗಣಿಸಿಲ್ಲ ಎಂಬುದಾಗಿ ಆರೋಪಿಸಿ ರಾಜೇಶ್ವರಿ ಶೆಟ್ಟಿ ಮತ್ತೆ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದರು. ಇದನ್ನು ಪರಿಗಣಿಸಿದ ಹೈಕೋರ್ಟ್ ಮಾ.20ರಂದು ವಿಶೇಷ ಅಭಿಯೋಜಕರ ನೇಮಕಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.