×
Ad

ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ ಕಾರು ಚಾಲಕ ಯತಿರಾಜ್ ಸೆರೆ

Update: 2018-07-05 11:34 IST

ಬಂಟ್ವಾಳ, ಜು. 5: ಕಲ್ಲಡ್ಕದಲ್ಲಿ ವ್ಯಕ್ತಿಯೊಬ್ಬರ ಮನೆಯೊಳಗೆ ನುಗ್ಗಿ ಹಲ್ಲೆ, ಕೊಲೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಓರ್ವ ಆರೋಪಿಯನ್ನು ಬುಧವಾರ ರಾತ್ರಿ ಬಂಧಿಸಿದ್ದಾರೆ.

ಇಲ್ಲಿನ ಕುದ್ರೆಬೆಟ್ಟು ಬಾಳ್ತಿಲ ಗ್ರಾಮದ ನಿವಾಸಿ, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಕಾರು ಚಾಲಕ ಯತಿರಾಜ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದ್ದು, ಪ್ರಕರಣದ ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲ ತಿಳಿಸಿವೆ.

ಘಟನೆ: ಜು. 3ರಂದು ಸಂಜೆ 5.30ಕ್ಕೆ ಕುದ್ರೆಬೆಟ್ಟು ಬಾಳ್ತಿಲ ಗ್ರಾಮದ ನಿವಾಸಿ ಚಂದ್ರಪ್ರಭಾ ಎಂಬವರ ಮನೆಯೊಳಗೆ ಯತಿರಾಜ್ ನೇತೃತ್ವದ ತಂಡವೊಂದು ನುಗ್ಗಿ ದಾಂಧಲೆ ಹಾಗೂ ಹಲ್ಲೆ ನಡೆಸಿ, ಅವರ ತಂದೆ ಕಾಂತಪ್ಪ ಪೂಜಾರಿ ಹಣೆ, ತಲೆಗೆ ಮತ್ತು ಕಾಲಿಗೆ ಹಲ್ಲೆ ಮಾಡಿ ಪರಾರಿಯಾಗಿದೆ ಎಂದು ಚಂದ್ರಪ್ರಭಾ ಪೊಲೀಸ್ ದೂರು ನೀಡಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಯತಿರಾಜ್‌ನನ್ನು ಬಂಧಿಸಿ, ದಸ್ತಗಿರಿ ಮಾಡಲಾಗಿದೆ. ಆರೋಪಿಯನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ರವಿಕಾಂತೇಗೌಡ ಅವರು ಮಾಹಿತಿ ನೀಡಿದ್ದಾರೆ.

ಕಳೆದ ಜೂನ್ ತಿಂಗಳಲ್ಲಿ ಆರೋಪಿ ಯತಿರಾಜ್ ನೇತೃತ್ವದ ತಂಡ ಮಹಿಳೆಯೋರ್ವರ ಮನೆಗೆ ಅಕ್ರಮ ಪ್ರವೇಶ ಮಾಡಿ ಮಾರಕಾಯುಧಗಳಿಂದ ಕೊಲೆಗೆ ಯತ್ನಿಸಿದ್ದಲ್ಲದೆ, ಜಾತಿ ನಿಂದನೆ ಮಾಡಿ ಮಾನಭಂಗಕ್ಕೆ ಯತ್ನಿಸಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News