×
Ad

ಮಾರಕ ಕಾಯಿಲೆಗಳ ವಿರುದ್ಧ ಹೋರಾಡಿ ಗೆದ್ದ ಬಾಲಿವುಡ್ ಸೆಲೆಬ್ರಿಟಿಗಳಿವರು

Update: 2018-07-05 14:45 IST
ಸೋನಾಲಿ ಬೇಂದ್ರೆ

ಮುಂಬೈ, ಜು. 5: ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಹೈಗ್ರೇಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆಂಬ ಸುದ್ದಿ ದೇಶಾದ್ಯಂತ ಸಿನೆಮಾ ಪ್ರಿಯರಿಗೆ ಆಘಾತ ತಂದಿದೆ. ಸದ್ಯ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 43 ವರ್ಷದ ಈ ನಟಿ ಆದಷ್ಟು ಬೇಗ ಕ್ಯಾನ್ಸರ್ ಅನ್ನು ಗೆದ್ದು ಬರಲಿ ಎಂದು ಬಾಲಿವುಡ್ ಹಾಗೂ ಚಿತ್ರ ಪ್ರಿಯರು ಪ್ರಾರ್ಥಿಸುತ್ತಿದ್ದಾರೆ.

ಸೊನಾಲಿಯಂತೆಯೇ ಬಾಲಿವುಡ್ ನ ಹಲವು ಸೆಲೆಬ್ರಿಟಿಗಳು ಕ್ಯಾನ್ಸರ್ ಮತ್ತಿತರ ಮಾರಕ ಕಾಯಿಲೆಗಳಿಗೆ ತುತ್ತಾಗಿ ಧೈರ್ಯದಿಂದ ಹೋರಾಡಿ ತಮ್ಮ ಕಾಯಿಲೆಗಳನ್ನು ಹಿಮ್ಮೆಟ್ಟಿಸಿದ್ದಾರೆ ಯಾ ಅದರ ವಿರುದ್ಧ ಈಗಲೂ ಸೆಣಸುತ್ತಿದ್ದಾರೆ.

ಮನೀಶಾ ಕೊಯಿರಾಲ

2012ರಲ್ಲಿ ನಟಿ ಮನೀಶಾ ಕೊಯಿರಾಲ ಅಂಡಾಶಯದ ಕ್ಯಾನ್ಸರ್ ಗೆ ತುತ್ತಾದಾಗ ಅವರ ಪಾಲಿಗೆ ಇಡೀ ಜಗತ್ತೇ ಬುಡಮೇಲಾದಂತಾದರೂ ಆಕೆ ಧೈರ್ಯದಿಂದ ಹೋರಾಡಿ ಕ್ಯಾನ್ಸರ್ ಅನ್ನು ಗೆದ್ದಿದ್ದಾರೆ. ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದಿದ್ದ ಮನೀಶಾ ಕಳೆದ ಐದು ವರ್ಷಗಳಿಂದ ಕ್ಯಾನ್ಸರ್ ಮುಕ್ತರಾಗಿದ್ದಾರೆ.

ಲೀಸಾ ರೇ

ಯಶಸ್ವೀ ಮಾಡೆಲ್ ಹಾಗೂ ನಟಿ ಲೀಸಾ ರೇ ಅವರು 2009ರಲ್ಲಿ ಮಲ್ಟಿಪಲ್ ಮೈಲೋಮಾ ಎಂಬ ಕ್ಯಾನ್ಸರ್ ಗೆ ತುತ್ತಾಗಿ ಚಿಕಿತ್ಸೆ ಪಡೆದು ಈಗ ಗುಣಮುಖರಾಗಿದ್ದಾರೆ.

ಅನುರಾಗ್ ಬಸು

ಬರ್ಫಿ ನಿರ್ದೇಶಕ ಅನುರಾಗ್ ಬಸು ಅವರಿಗೆ 2004ರಲ್ಲಿ ಪ್ರೊಮೈಯೆಲೊಸಿಟಿಕ್ ಲುಕೇಮಿಯಾ ಎಂಬ ರಕ್ತದ ಕ್ಯಾನ್ಸರ್ ಇದೆಯೆಂದು ಪತ್ತೆಯಾಗಿತ್ತು. ಅವರು ಬದುಕುಳಿಯುವ ಸಾಧ್ಯತೆ ಶೇ 50ರಷ್ಟು ಎಂದು ವೈದ್ಯರು ಹೇಳಿದ್ದರೂ ಧೃತಿಗೆಡದೆ ಹೋರಾಡಿ ಗೆದ್ದು ಬಂದಿದ್ದಾರೆ.

ಚಿಕಿತ್ಸೆಯಲ್ಲಿರುವಾಗಲೇ ಅವರು ‘ಗ್ಯಾಂಗ್ ಸ್ಟಾರ್’ ಮತ್ತು ‘ಲೈಫ್ ಇನ್ ಎ ಮೆಟ್ರೋ’ ಸ್ಕ್ರಿಪ್ಟ್ ರಚಿಸಿದ್ದರು.

ಹೃತಿಕ್ ರೋಷನ್ 

ಜನಪ್ರಿಯ ಬಾಲಿವುಡ್ ನಟ ಹೃತಿಕ್ ರೋಶನ್ ಅವರಿಗೆ ‘ಬ್ಯಾಂಗ್ ಬ್ಯಾಂಗ್’ ಚಿತ್ರದ ಆಕ್ಷನ್ ದೃಶ್ಯವೊಂದರ ಚಿತ್ರೀಕರಣದ ವೇಳೆ ಮೆದುಳಿಗೆ ಏಟು ಬಿದ್ದ ಪರಿಣಾಮ ಅಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಮುಂದೆ ಚಿಕಿತ್ಸೆ ಪಡೆದು ಅವರು ಸಂಪೂರ್ಣ ಗುಣಮುಖರಾಗಿದ್ದಾರೆ.

ಅಮಿತಾಬ್ ಬಚ್ಚನ್

1982ರಲ್ಲಿ ಕೂಲಿ ಚಿತ್ರದ ಚಿತ್ರೀಕರಣದ ವೇಳೆ ಉಂಟಾದ ಅಪಘಾತವೊಂದರಲ್ಲಿ ಅಮಿತಾಬ್ ಬಚ್ಚನ್ ಅವರಿಗೆ ಪೆಟ್ಟಾಗಿತ್ತು. ಎರಡು ವರ್ಷಗಳ ನಂತರ ಆವರಿಗೆ ಮೈಯೇಸ್ಥೇನಿಯಾ ಗ್ರೇವಿಸ್ ಎಂಬ ಕಾಯಿಲೆ ಉಂಟಾಗಿ ಅವರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದರೂ ಎರಡೂ ಸಮಸ್ಯೆಗಳಿಂದ ಯಶಸ್ವಿಯಾಗಿ ಹೊರ ಬಂದಿದ್ದಾರೆ.

ಇರ್ಫಾನ್ ಖಾನ್

ಬಾಲಿವುಡ್ ನ ಪ್ರತಿಭಾನ್ವಿತ ನಟ ಇರ್ಫಾನ್ ಖಾನ್ ನ್ಯೂರೋ ಎಂಡೋಕ್ರೀನ್ ಟ್ಯೂಮರ್ ಎಂಬ ಒಂದು ವಿಧದ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಸದ್ಯ ಲಂಡನ್ ನಲ್ಲಿ ಚಿಕಿತ್ಸೆಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News