ಸುಜೀರ್ ಪ್ರೌಢಶಾಲೆಯಲ್ಲಿ ಟಿಆರ್‌ಎಫ್ ವತಿಯಿಂದ ವನಮಹೋತ್ಸವ, ಸಸಿ ವಿತರಣೆ
ಬಂಟ್ವಾಳ, ಜು. 5: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಟ್ಯಾಲೆಂಟ್ ಮಹಿಳಾ ಪದವೀಧರರ ಸಂಘ ಹಾಗೂ ಸುಜೀರ್ ಸರಕಾರಿ ಪ್ರೌಢಶಾಲೆ ಇದರ ಜಂಟಿ ಆಶ್ರಯದಲ್ಲಿ "ವನಮಹೋತ್ಸವ ಮತ್ತು ಮನೆಗೊಂದು ಗಿಡ ವಿತರಣಾ ಕಾರ್ಯಕ್ರಮ" ಸುಜೀರು ಸರಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಗುರುವಾರ ನಡೆಯಿತು.
ವಲಯ ಅರಣ್ಯಾಧಿಕಾರಿ ಸುರೇಶ್ ಅವರು ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಿ ಮಾತನಾಡಿ, ಪರಿಸರ ಸಂಪತ್ ಭರಿತವಾಗಬೇಕಾದರೆ ಮರಗಳನ್ನು ಬೆಳೆಸಬೇಕು. ಅಲ್ಲದೆ, ಪರಿಸರದ ಬಗ್ಗೆ ಮಕ್ಕಳಿಗೆ ಹೆಚ್ಚಿನ ಕಾಳಜಿ ವಹಿಸುವಂತಹ ಮಾಹಿತಿಯೂ ಅಗತ್ಯ ಎಂದರು.
ಈ ಪರಿಸರವು ಯಾವುದೇ ಫಲಪೇಕ್ಷೆ ಇಲ್ಲದೆ ನಮಗೆ ಶುದ್ಧ ಗಾಳಿ ನೀಡುವ ಮೂಲಕ ಉಪಕಾರ ಮಾಡುತ್ತಿದೆ. ಆದರೆ, ನಾವು ಮರವನ್ನು ಕಡಿದು ಪರಿಸರದ ಮೇಲೆ ದಾಳಿ ಮಾಡುತ್ತಿದ್ದೇವೆ. ಇದೆ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಹಣ ತೆತ್ತು ಆಮ್ಲಜನಕವನ್ನು ಖರೀದಿಸುವ ಸನ್ನಿವೇಶ ಉಂಟಾಗಬಹುದು ಎಂದು ವಿಷಾದಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್ ಮಾತನಾಡಿ, ಮರಗಳನ್ನು ಉಳಿಸುವುದು ಅರಣ್ಯ ಇಲಾಖೆಯ ಕೆಲಸ ಎಂದು ಹೇಳಿ ಹಿಂಜರಿಯು ವುದಲ್ಲ. ಪರಿಸರ ಸಂರಕ್ಷಣೆ ನಮ್ಮ ಹಕ್ಕಾಗಿದೆ. ಇದಕ್ಕೆ ಸಾರ್ವಜನಿಕರ ಬೆಂಬಲವೂ ಅಷ್ಟೇ ಅಗತ್ಯ ಎಂದು ಹೇಳಿದರು.
ಪುದು ಗ್ರಾಪಂ ಉಪಾಧ್ಯಕ್ಷ ಲೀಡಿಯೊ ಪಿಂಟೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟಿಆರ್‌ಎಫ್‌ನ ಸಲಹೆಗಾರ ರಫೀಕ್ ಮಾಸ್ಟರ್ ಅವರು ಪರಿಸರದ ಸಂರಕ್ಷಣೆಯ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಟಿಆರ್‌ಎಫ್‌ನ ಪದವೀಧರರ ಅಧ್ಯಕ್ಷೆ ಮುನೀಝಾ, ಶಾಲಾ ಮುಖ್ಯ ಶಿಕ್ಷಕಿ ಶಶಿಮಂಗಳ, ಗ್ರಾಪಂ ಸದಸ್ಯ ಇಕ್ಬಾಲ್, ಅರಣ್ಯ ಸಿಬ್ಬಂದಿ ವಿನಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಟಿಆರ್‌ಎಫ್‌ನ ಮುಮ್ತಾಝ್ ಸ್ವಾಗತಿಸಿ, ಟಿಆರ್‌ಎಫ್‌ನ ಸದಸ್ಯ ಹಮೀದ್ ಪ್ರಸ್ತಾವಿಸಿದರು. ಶಿಕ್ಷಕ ಜಯಪ್ರಕಾಶ್ ವಂದಿಸಿದರು. ಮುಹಮ್ಮದ್ ಮಾಸ್ಟರ್ ವಳವೂರು ನಿರೂಪಿಸಿದರು. ಈ ಸಂದರ್ಭ ಶಾಲಾ ಕೈತೋಟದಲ್ಲಿ ಸಸಿಗಳನ್ನು ನೆಡಲಾಯಿತು.