ಬಂಟ್ವಾಳದಲ್ಲಿ 3 ಮಲೇರಿಯಾ, 14 ಡೆಂಗ್ಯೂ ಪ್ರಕರಣಗಳು ಪತ್ತೆ: ಆರೋಗ್ಯಾಧಿಕಾರಿ ದೀಪಾ ಪ್ರಭು
ಬಂಟ್ವಾಳ, ಜು. 5: ತಾಲೂಕಿನಲ್ಲಿ 3 ಮಲೇರಿಯಾ ಹಾಗೂ 14 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ ಎಂದು ತಾಲೂಕು ಆರೋಗ್ಯಾಧಿಕಾರಿ ದೀಪಾ ಪ್ರಭು ಮಾಹಿತಿ ನೀಡಿದ್ದಾರೆ.
ಬಿ.ಸಿ.ರೋಡಿನ ತಾಲೂಕು ಪಂಚಾಯತ್ ಎಸ್‌ಜಿಆರ್‌ಎಸ್‌ವೈ ಸಭಾಂಗಣದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಮಾಸಿಕ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಇವುಗಳ ಪೈಕಿ ಬಂಟ್ವಾಳ ನಗರ 2, ಪುದು ಗ್ರಾಮದಲ್ಲಿ 1 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. ಪುದು, ವಾಮದಪದವು, ಸಜಿಪ, ಅಳಿಕೆ, ಕುರ್ನಾಡು, ವಿಟ್ಲ ಭಾಗದಲ್ಲಿ ತಲಾ ಒಂದೊಂದು ಮಲೇರಿಯಾ ಪ್ರಕರಣಗಳು, ಪೂಂಜಲಕಟ್ಟೆ 3, ಬಂಟ್ವಾಳ ನಗರ 2, ಮಂಚಿ 3 ಸೇರಿದಂತೆ ವಿವಿಧ ಪ್ರದೇಶದಲ್ಲಿ ಒಟ್ಟು 14 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಇದೀಗ ಒಟ್ಟು 78 ಶಂಕಿತ ಡೆಂಗ್ಯೂ ಪತ್ತೆಯಾಗಿದ್ದು, ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಡೆಂಗ್ಯೂ ಹಾಗೂ ಮಲೇರಿಯಾ ರೋಗ ಸಂಪೂರ್ಣ ನಿಯಂತ್ರದಲ್ಲಿದೆ ಎಂದು ಹೇಳಿದರು.
ಶಂಕಿತವಿರುವ ಪ್ರದೇಶಗಳಿಗೆ ಭೇಟಿ ನೀಡಿ, ಇನ್ನೊಂದು ಸುತ್ತಿನ ಫಾಗಿಂಗ್ ನಡೆಸುವಂತೆ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರು ಸೂಚನೆ ನೀಡಿದರು.
ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯುತ್ತಿದ್ದು, ಕಳೆದ ವರ್ಷದಿಂದ ಈ ವರ್ಷ ಹೆಚ್ಚು ದಾಖಲಾತಿಯಾಗಿವೆ. ಮಕ್ಕಳ ಕೊರತೆಯಿಂದ ಜಕ್ರಿಬೆಟ್ಟು, ತೋರಣಕಟ್ಟೆ ಎರಡು ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲದೆ, ಸ್ಯಾಟ್ಸ್‌ನ ಆನ್‌ಲೈನ್ ದಾಖಲಾತಿಯಲ್ಲಿ ಬಂಟ್ವಾಳ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಅವರು ಸಭೆಯ ಗಮನಕ್ಕೆ ತಂದರು. ಜ್ವರದ ಪ್ರಕರಣಗಳು ಪತ್ತೆಯಾಗಿದ್ದು, ವೈದ್ಯರು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ ಸೂಚನೆ ನೀಡಿದರು.
ಸ್ಮಶಾನವನ್ನು ಮುಕ್ತಿಧಾಮ ಮಾಡುವ ಯೋಜನೆಗಳಿರುವುದರಿಂದ ಅವರಿಗೆ ಬೇಕಾದಷ್ಟು ಗಿಡ ವಿತರಣೆ ಮಾಡುವಂತೆ ಎಂದು ಇಒ ರಾಜಣ್ಣ ಸೂಚಿಸಿದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷೀ ಸಿ. ಬಂಗೇರ, ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು.