ಗುಂಪು ಹತ್ಯೆ ಪ್ರಕರಣದ ಬಗ್ಗೆ ಪ್ರಶ್ನೆ: ರಾಜ್ಯದಲ್ಲಿ ಸಂತೋಷದ ಅಲೆಯಿದೆ ಎಂದ ತ್ರಿಪುರಾ ಮುಖ್ಯಮಂತ್ರಿ!

Update: 2018-07-05 14:48 GMT

ಅಗರ್ತಲಾ, ಜು.5: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಬುಧವಾರ ಸಮೂಹ ಹತ್ಯೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ನೀಡಿದ ಉತ್ತರದಿಂದ ಸದ್ಯ ವಿವಾದಕ್ಕೀಡಾಗಿದ್ದಾರೆ.

ಅಗರ್ತಲಾ ವಿಮಾನ ನಿಲ್ದಾಣಕ್ಕೆ ಪುನರ್‌ನಾಮಕರಣ ಮಾಡುವ ಸಮಯದಲ್ಲಿ ಪತ್ರಕರ್ತರೊಬ್ಬರು ರಾಜ್ಯದಲ್ಲಿ ನಡೆಯುತ್ತಿರುವ ಸಮೂಹ ಹತ್ಯಾ ಪ್ರಕರಣಗಳ ಬಗ್ಗೆ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಅವರ ಅಭಿಪ್ರಾಯವನ್ನು ಕೇಳಿದಾಗ, “ಇಂದು ತ್ರಿಪುರಾದಲ್ಲಿ ಸಂತೋಷದ ಅಲೆಯಿದೆ ಎಂಬುದನ್ನು ನೀವು ಯೋಚಿಸಬೇಕು ಎಂದು ನಾನು ಭಾವಿಸುತ್ತೇನೆ. ನೀವೂ ಈ ಸಂತೋಷದ ಅಲೆಯನ್ನು ಆಸ್ವಾದಿಸಬೇಕು. ಆಗ ನೀವೂ ಸಂತೋಷವಾಗಿರುತ್ತೀರಿ. ಆ ಬಗ್ಗೆ ಒಮ್ಮೆ ಯೋಚಿಸಿ. ನನ್ನ ಮುಖವನ್ನೊಮ್ಮೆ ನೋಡಿ, ನಾನೆಷ್ಟು ಸಂತೋಷವಾಗಿದ್ದೇನೆ” ಎಂದು ಉತ್ತರಿಸಿದ್ದರು.

ಅಗರ್ತಲಾ ವಿಮಾನ ನಿಲ್ದಾಣದ ಹೆಸರನ್ನು ಬದಲಿಸಿ ರಾಜ್ಯವನ್ನಾಳಿದ ಪ್ರಮುಖ ರಾಜ ಮಹಾರಾಜ ಬೀರ್ ಬಿಕ್ರಮ್ ಮಾಣಿಕ್ಯ ಕಿಶೋರ್ ಹೆಸರನ್ನು ನೀಡಲಾಗಿದೆ. ಜೂನ್ 28ರಂದು ತ್ರಿಪುರಾದಲ್ಲಿ ವದಂತಿಗಳನ್ನು ದೂರ ಮಾಡಲು ಸಾರ್ವಜನಿಕವಾಗಿ ಘೋಷಣೆಗಳನ್ನು ಮಾಡಲು ನಿಯೋಜಿಸಲಾಗಿದ್ದ ವ್ಯಕ್ತಿ, ಉತ್ತರ ಪ್ರದೇಶದ ಓರ್ವ ಕಾರ್ಮಿಕ ಹಾಗೂ ಓರ್ವ ಅಪರಿಚಿತ ಮಹಿಳೆ, ಹೀಗೆ ಮೂವರನ್ನು ವಿವಿಧ ಕಡೆಗಳಲ್ಲಿ ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ರಾಜ್ಯದಲ್ಲಿ ಮಕ್ಕಳ ಕಳ್ಳರು ಮತ್ತು ಕಿಡ್ನಿ ಕಳ್ಳಸಾಗಾಟಗಾರರ ಹಾವಳಿ ಹೆಚ್ಚಾಗಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಈ ಹತ್ಯೆಗಳು ನಡೆದಿದ್ದವು.

ಘಟನೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಅನೇಕರನ್ನು ಬಂಧಿಸಿದ್ದರು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಮುಖ್ಯಮಂತ್ರಿಯಾದ ದಿನದಿಂದಲೂ ಬಿಪ್ಲಬ್ ದೇಬ್ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಲೇ ಬಂದಿದ್ದಾರೆ. ಈ ಹಿಂದೆ ಮಹಾಭಾರತ ಸಮಯದಲ್ಲಿ ಅಂತರ್ಜಾಲ ಮತ್ತು ಉಪಗ್ರಹಗಳಿದ್ದವು ಎಂದು ಹೇಳುವ ಮೂಲಕ ದೇಬ್ ವಿವಾದ ಹುಟ್ಟು ಹಾಕಿದ್ದರು. 21 ವರ್ಷಗಳ ಹಿಂದೆ ಡಯಾನಾ ಹೇಡನ್‌ರನ್ನು ವಿಶ್ವ ಸುಂದರಿಯಾಗಿ ಆಯ್ಕೆ ಮಾಡಿದ ಕ್ರಮವನ್ನೂ ದೇಬ್ ಪ್ರಶ್ನಿಸಿದ್ದರು. ಆದರೆ ಇದಕ್ಕೆ ನಂತರ ಅವರು ಕ್ಷಮೆ ಕೇಳಬೇಕಾಗಿ ಬಂದಿತ್ತು. ಸದ್ಯ 49ರ ಹರೆಯದ ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ಬಿಜೆಪಿ ಪಾಳಯದಿಂದ ಯಾವ ಸ್ಪಷ್ಟೀಕರಣವೂ ವ್ಯಕ್ತವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News