×
Ad

ಮೈತ್ರಿ ಸರಕಾರದ ಚೊಚ್ಚಲ ಬಜೆಟ್: ಗಣ್ಯರ ಅಭಿಪ್ರಾಯಗಳು

Update: 2018-07-05 21:14 IST

ಯಡಿಯೂರಪ್ಪ ಹೋರಾಟದ ಫಲವಾಗಿ ಸಾಲಮನ್ನಾ

ಬಿ.ಎಸ್. ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ತಕ್ಷಣ ರೈತರ ಪೂರ್ಣ ಪ್ರಮಾಣದ ಸಾಲ ಮನ್ನಾ ಘೋಷಣೆ ಮಾಡಿದ್ದರು. ಎಚ್.ಡಿ.ಕುಮಾರಸ್ವಾಮಿ ಅಧಿಕಾರ ವಹಿಸಿ ಹಲವು ದಿನಗಳಾದರೂ ಮೀನಮೇಷ ಎಣಿಸಿ, ಯಡಿಯೂರಪ್ಪ ಅವರ ಹೋರಾಟದ ಫಲವಾಗಿ ರೈತರ ಸಾಲ ಮನ್ನಾ ಮಾಡಲಾಗಿದೆ. ಅದು ಎಷ್ಟು ಫಲಪ್ರದ ವಾಗಲಿದೆ ಗೊತ್ತಿಲ್ಲ. ಸಿದ್ದರಾಮಯ್ಯ ಕೋಪದಲ್ಲಿದ್ದು, ಆ ಕೋಪವನ್ನು ತಣಿಸಿ ಘೋಷಣೆ ಅನುಷ್ಠಾನಕ್ಕೆ ತರಬೇಕಾದ ಜವಾಬ್ದಾರಿ ಕುಮಾರಸ್ವಾಮಿ ಅವರಿಗಿದೆ.
- ನಳಿನ್ ಕುಮಾರ್ ಕಟೀಲ್, ಸಂಸದರು.

ಕರಾವಳಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಬಜೆಟ್: ಶಾಸಕ ಡಿ ವೇದವ್ಯಾಸ ಕಾಮತ್

ಕರಾವಳಿಯ ಬಗ್ಗೆ ಒಂದೇ ಒಂದು ಶಬ್ದವನ್ನು ಹೇಳದೆ, ಕರಾವಳಿಯನ್ನು ಸಂಪೂರ್ಣವಾಗಿ ಕಡೆಗಣಿಸಿ, ದ್ವೇಷ ರಾಜಕೀಯವನ್ನು ಮಾಡಿರುವ ಕುಮಾರ ಸ್ವಾಮಿಯವರ ಬಜೆಟ್ ಕರ್ನಾಟಕದ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಬಜೆಟ್ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಇಲ್ಲಿಯ ತನಕ ಕರ್ನಾಟಕದಲ್ಲಿ ಹಲವು ಬಜೆಟ್ ಗಳು ಮಂಡನೆಯಾಗಿವೆ. ಆದರೆ ಇಲ್ಲಿಯ ತನಕ ಇಂತಹ ದ್ವೇಷ ರಾಜಕಾರಣವನ್ನು ಕರಾವಳಿಯ ಜನ ನೋಡಿಲ್ಲ. ಸ್ವಾತಂತ್ರ್ಯದ ನಂತರ ಪ್ರಥಮ ಬಾರಿಗೆ ಕಳೆದ ತಿಂಗಳು ಮಂಗಳೂರಿನಲ್ಲಿ ಹಿಂದೆಂದೂ ಕೇಳಿರದಷ್ಟು ಮಳೆ ಸುರಿದು ಕೃತಕ ನೆರೆಯ ಸಮಸ್ಯೆ ಉಂಟಾಗಿತ್ತು. ನೂರಾರು ಸಂಖ್ಯೆಯಲ್ಲಿ ಮನೆಗಳು ಧ್ವಂಸಗೊಂಡು ಸಾವಿರಾರು ಜನ ಅಪಾರ ಪ್ರಮಾಣದ ನಷ್ಟವನ್ನು ಅನುಭವಿಸಿದ್ದರು. ಮನೆಗಳ, ಅಂಗಡಿಗಳ ಒಳಗೆ ಮಳೆಯ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಸಾಮಾನು ಸರಂಜಾಮುಗಳು ಹಾನಿಯಾಗಿದ್ದವು. ಜನರ ಸಂಕಷ್ಟವನ್ನು ಸಚಿವರ ಗಮನಕ್ಕೆ ತಂದು ಹೆಚ್ಚಿನ ಪರಿಹಾರ ನೀಡಲು ಮನವಿ ಮಾಡಲಾಗಿತ್ತು. ಆದರೆ ಬಜೆಟಿನಲ್ಲಿ ಆ ಬಗ್ಗೆ ಒಂದೇ ಒಂದೂ ಚಿಕ್ಕಾಸು ಕೂಡ ಇಡದೆ ಜನರು ಅನುಭವಿಸಿದ ಸಂಕಷ್ಟವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಮಂಗಳೂರು ತುಂಬೆಯ ಹೊಸ ಅಣೆಕಟ್ಟಿನ ಎತ್ತರದಿಂದ ಭೂಮಿ ಕಳೆದುಕೊಂಡು ಸಂತ್ರಸ್ತರಾಗಿರುವ ಕೃಷಿಕರಿಗೆ 120 ಕೋಟಿ ಪರಿಹಾರದ ಪ್ಯಾಕೇಜ್ ಅನ್ನು ನೀಡುವಂತೆ ತಾನು ಮನವಿ ಮಾಡಿದ್ದೆ. ಅದರ ಉಲ್ಲೇಖವೇ ಇಲ್ಲ. ಮಂಗಳೂರು ನಗರದ ಒಳಚರಂಡಿ, ಕುಡಿಯುವ ನೀರಿನ ಯೋಜನೆಗಳಿಗೆ ಅನುದಾನ ನೀಡಲು ಕೇಳಿಕೊಂಡದ್ದನ್ನು ಗಣನೆಗೆ ತೆಗೆದುಕೊಂಡಿಲ್ಲ. ಮೀನುಗಾರರ ಸಾಲಮನ್ನಾ, ಹೊಸ ಜೆಟ್ಟಿ ನಿರ್ಮಾಣ, ಬಂದರು ಅಭಿವೃದ್ಧಿಗೆ ಅನುದಾನ, ಮೀನುಗಾರರ ಯಾಂತ್ರೀಕೃತ ದೋಣಿಯ ಇಂಜಿನ್‌ನ ಅಶ್ವಶಕ್ತಿಯ ಪ್ರಮಾಣ ಹೆಚ್ಚಿಸಿರುವುದರಿಂದ ದಿನವಹಿ 350 ಲೀಟರ್ ನಿಂದ 500 ಲೀಟರ್ ವರೆಗೆ ಹೆಚ್ಚುವರಿ ಡಿಸೀಲ್ ನೀಡುವಂತೆ ಕೋರಲಾಗಿತ್ತು. ಆಳಸಮುದ್ರದಲ್ಲಿ ಮೀನುಗಾರಿಕಾ ವೃತ್ತಿ ಯನ್ನು ಮಾಡುವ ಮೀನುಗಾರರು ಆರ್ಥಿಕ ಸಂಕಟವನ್ನು ಅನುಭವಿಸುತ್ತಿರುವುದರಿಂದ ಮೀನುಗಾರರ ಸಾಲಮನ್ನಾವನ್ನು ಮಾಡಲು ಮತ್ತು ಮೀನುಗಾರರ ಅಭಿವೃದ್ಧಿಗೆ ಇನ್ನು ಕೆಲವು ಯೋಜನೆಗಳ ಬಗ್ಗೆ ಕರಾವಳಿಯ ಶಾಸಕರುಗಳ ನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು. ಆದರೆ ಯಾವುದಕ್ಕೂ ಸ್ಪಂದನೆ ದೊರಕಿಲ್ಲ.

- ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ.

ಈ ಬಜೆಟ್ ನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಿಗೆ ಯಾವುದೇ ಅನುದಾನ ನೀಡದ್ದು ಖಂಡನೀಯ. ಮುಖ್ಯಮಂತ್ರಿಯವರು ಈ ಸಾಲಿನ ಬಜೆಟ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಸೇರಿದಂತೆ ಯಾವುದೇ ಕರಾವಳಿ ಭಾಗದ ಕುರಿತು ಚಕಾರವೆತ್ತಲಿಲ್ಲ. ಕರಾವಳಿಯ ಪ್ರಮುಖ ವ್ಯವಹಾರವಾದ ಮೀನುಗಾರಿಕೆಗೂ ಕೂಡಾ ಅನುದಾನ ನೀಡಲಿಲ್ಲ. ಇನ್ನು ಮಂಗಳೂರಿನಲ್ಲಿ ನೆರೆ, ಮಳೆಯ ಹಾವಳಿಯಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದ್ದು, ಈ ಕುರಿತು ಯಾವುದೇ ಪ್ಯಾಕೇಜ್ ಗಳನ್ನು ಬಿಡುಗಡೆ ಮಾಡಿಲ್ಲ. ಕರ್ನಾಟಕ ರಾಜಧಾನಿ ಬೆಂಗಳೂರಿನ ಬಳಿಕ ಮುಂದುವರಿಯುತ್ತಿರುವ ನಗರವಾಗಿದೆ ಮಂಗಳೂರು. ಸ್ಮಾರ್ಟ್ ಸಿಟಿ ಯೋಜನೆ ಗುರುತು ಮಾಡಿಟ್ಟ ನಗರವಾಗಿದೆ. ಹೀಗಿದ್ದು ಕೂಡಾ ಮಂಗಳೂರಿಗೆ ಯಾವುದೇ ರೀತಿಯ ಅನುದಾನ ನೀಡದಿರುವುದು ಖಂಡನೀಯ.

- ಭರತ್ ಶೆಟ್ಟಿ, ಶಾಸಕರು, ಮಂಗೂರು ಉತ್ತರ ವಿಧಾನಸಭಾ ಕ್ಷೇತ್ರ.

ಜನಸಾಮಾನ್ಯರಿಗಾಗಿನ ಬಜೆಟ್: ಮುಹಮ್ಮದ್ ಕುಂಞಿ
ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿರುವಂತೆ ರೈತರ ಸಾಲ ಮನ್ನಾವನ್ನು ಶೇ. 100ರಷ್ಟು ಮಾಡಲು ಸಾಧ್ಯವಾಗದಿದ್ದರೂ ಸಮ್ಮಿಶ್ರ ಸರಕಾರದ ಹೊರತಾಗಿಯೂ 34,000 ಕೋಟಿ ರೂ. ರೈತರ ಸಾಲ ಮನ್ನಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಜನಸಾಮಾನ್ಯರ ಬಜೆಟನ್ನು ಮುಖ್ಯಮಂತ್ರಿ ಕುಮಾರ ಸ್ವಾಮಿ ನೀಡಿದ್ದಾರೆ. ರೈತರ ಸಾಲ ಮನ್ನಾ ವಿಷಯವೇ ಈ ಬಾರಿಯ ಬಜೆಟ್ ಪೂರ್ವದಲ್ಲಿ ಚರ್ಚೆಗೆಗ್ರಾಸವಾಗಿತ್ತು. ಪ್ರಶ್ನಾತೀತವಾಗಿತ್ತು. ಮಿತ್ರ ಪಕ್ಷದ ಸಹಕಾರದೊಂದಿಗೆ ಅದನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಬಡ ವರ್ಗಕ್ಕೆ ಪೂರಕವಾದ ಬಜೆಟ್ ನೀಡಿದ್ದಾರೆ.
- ಮುಹಮ್ಮದ್ ಕುಂಞಿ, ಜಿಲ್ಲಾಧ್ಯಕ್ಷರು, ಜೆಡಿಎಸ್.

ಸಾಲ ಮನ್ನಾ ಐತಿಹಾಸಿಕ ನಿರ್ಧಾರ: ಎಸಿ ವಿನಯರಾಜ್
ಕೃಷಿ, ನೀರಾವರಿ, ಆರೋಗ್ಯ ಕ್ಷೇತ್ರ ಸೇರಿದಂತೆ ಅಭಿವೃದ್ದಿಗೆ ಪೂರಕವಾದ ಬಜೆಟನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ್ದಾರೆ. ಸಾಲಮನ್ನಾದ ಮೂಲಕ 41 ಲಕ್ಷ ರೈತ ಕುಟುಂಬಗಳ ಕಣ್ಣೀರು ಒರೆಸುವ ಕೆಲಸವನ್ನು ವಾಡಿದ್ದಾರೆ. ಇದೊಂದು ಐತಿಹಾಸಿಕ ನಿರ್ಧಾರ. ಕಾಂಗ್ರೆಸ್ ಮತ್ತು ಜೆಡಿಎಸ್ ಕಳೆದ ಚುನಾವಣೆಯಲ್ಲಿ ರೈತರ ಸಾಲಮನ್ನಾದ ಭರವಸೆ ನೀಡಿದ್ದು, ಅದನ್ನು ಈಡೇರಿಸಿದೆ. ದ.ಕ. ಜಿಲ್ಲೆಗೆ ಯಾವುದೇ ರೀತಿಯಲ್ಲಿ ಅನ್ಯಾಯ ಆಗಿಲ್ಲ. ರಾಜ್ಯದಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸಾವಿರಾರು ಕೋಟಿ ರೂ.ಗಳ ಯೋಜನೆಯನ್ನು ಜಿಲ್ಲೆಗೆ ನೀಡಿದ್ದು, ಅವುಗಳು ಪ್ರಗತಿಯಲ್ಲಿವೆ.
- ಎ.ಸಿ. ವಿನಯರಾಜ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರು ಹಾಗೂ ನ್ಯಾಯವಾದಿ.

ಸಾಲ ಮನ್ನಾಕ್ಕೆ ಮಿತಿ ನಿಗದಿ ಸರಿಯಲ್ಲ
ಬಜೆಟ್‌ನಲ್ಲಿ 34 ಸಾವಿರ ಕೋಟಿ ರೂ. ರೈತರ ಬೆಳೆ ಸಾಲ ಮನ್ನ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ 2 ಲಕ್ಷ ರೂ. ಮಿತಿ ನಿಗದಿಪಡಿಸಿರುವುದು ಹಾಗೂ 2017 ಡಿ.31ರ ಗಡುವು ಹಾಕಿರುವುದು, ಪ್ರಾಮಾಣಿಕವಾಗಿ ಬೆಳೆ ಸಾಲ ನವೀಕರಣ ಮಾಡಿದ ರೈತರಿಗೆ ಕೇವಲ 25 ಸಾವಿರ ಮಾತ್ರ ಸಹಾಯ ಮಾಡಿದಂತಾಗಿದೆ. ರೈತರ ಸಂಪೂರ್ಣ ಸಾಲ ಮನ್ನಾ ಅಂದರೆ 11,400 ಕೋಟಿ ರೂ. ಆಗಿದ್ದು, ಕನಿಷ್ಠ ಸಂಪೂರ್ಣ ಬೆಳೆಸಾಲ 54 ಸಾವಿರ ಕೋಟಿ ರೂ. ಯಾವುದೇ ಷರತ್ತಿಲ್ಲದೆ ಮನ್ನಾ ಮಾಡಬೇಕಾಗಿತ್ತು.
-ರವಿಕಿರಣ್ ಪುಣಚ, ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷರು, ದ.ಕ. ಕರ್ನಾಟಕ ರಾಜ್ಯ ರೈತ ಸಂಘ.

ವಿದ್ಯುತ್‌ಗೆ 20 ಪೈಸೆ ಹೆಚ್ಚಳ ಸಮಂಜಸವಲ್ಲ
2 ಲಕ್ಷ ರೂ. ಸಾಲ ಮನ್ನಾ ಮಾಡಿರುವುದು ಸ್ವಾಗತಾರ್ಹವಾದರೂ ಕೆಲವೊಂದು ವಿಚಾರದಲ್ಲಿ ನಿಜವಾಗಿ ಸಂಕಷ್ಟದಲ್ಲಿರುವ ರೈತರಿಗೆ ಇದರ ಪ್ರಯೋಜನ ಸಿಗುವುದಿಲ್ಲ. ಇದು ಮಾತ್ರವಲ್ಲದೆ 1 ಯೂನಿಟ್ ವಿದ್ಯುತ್‌ಗೆ 20ಪೈಸೆ ಹೆಚ್ಚಳ ಮಾಡಿರುವುದು ಸಮಂಜಸವಲ್ಲ. ಇದರಿಂದ ರೈತರಿಗೆ ಮತ್ತು ಜನಸಾಮಾನ್ಯರಿಗೆ ಮತ್ತಷ್ಟು ಹೊರೆಯಾದಂತಾಗಿದೆ. ರಾಜ್ಯದಲ್ಲಿ ಕೇರಳ ಮಾದರಿ ಋಣಮುಕ್ತ ಕಾಯ್ದೆ ಜಾರಿಯಾಗಬೇಕು ಮತ್ತು ಡಾ. ಸ್ವಾಮಿನಾಥನ್ ಆಯೋಗ ಸರಕಾರಕ್ಕೆ ಪ್ರಸ್ತಾಪ ಮಾಡಿದ್ದ ಕೃಷಿ ಉತ್ಪನ್ನ ವೆಚ್ಚದ 1.5 ಪಟ್ಟು ಬೆಲೆ ಸೇರಿಸಿ ನೀಡಿದರೆ ರೈತರ ಉದ್ಧಾರ ಸಾಧ್ಯವಾದೀತು.
-ಯಾದವ ಶೆಟ್ಟಿ, ರೈತ ಮುಖಂಡ, ಸಿಪಿಎ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News