ಬೆಡೋಯಿನ್ ಸಮುದಾಯದ ಗ್ರಾಮ ಸಮತಟ್ಟು ಕಾರ್ಯಾಚರಣೆ: ಫೆಲೆಸ್ತೀನಿಯರು, ಇಸ್ರೇಲ್ ಅಧಿಕಾರಿಗಳ ನಡುವೆ ಘರ್ಷಣೆ

Update: 2018-07-05 16:57 GMT

ಗಾಝಾ ಪಟ್ಟಿ (ಫೆಲೆಸ್ತೀನ್), ಜು. 5: ಆಕ್ರಮಿತ ಪಶ್ಚಿಮ ದಂಡೆಯ ಆಯಕಟ್ಟಿನ ಭಾಗವಾಗಿರುವ ಬೆಡೋಯಿನ್ ಸಮುದಾಯದ ಗ್ರಾಮವೊಂದನ್ನು ಸಮತಟ್ಟುಗೊಳಿಸುವ ವಿಚಾರದಲ್ಲಿ ಫೆಲೆಸ್ತೀನ್ ಪ್ರತಿಭಟನಕಾರರು ಮತ್ತು ಇಸ್ರೇಲ್ ಅಧಿಕಾರಿಗಳ ನಡುವೆ ಬುಧವಾರ ಘರ್ಷಣೆ ಸಂಭವಿಸಿದೆ.

ಈ ಗ್ರಾಮವನ್ನು ಸಮತಟ್ಟುಗೊಳಿಸದಂತೆ ಅಂತರ್ರಾಷ್ಟೀಯ ಒತ್ತಡವಿದ್ದರೂ, ಸಮತಟ್ಟುಗೊಳಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂಬ ಭೀತಿಯನ್ನು ಪ್ರತಿಭಟನಕಾರರು ವ್ಯಕ್ತಪಡಿಸಿದ್ದಾರೆ.

ಫೆಲೆಸ್ತೀನ್ ಧ್ವಜಗಳನ್ನು ಹಿಡಿದುಕೊಂಡ ಕೆಲವರು ಸೇರಿದಂತೆ, ಪ್ರತಿಭಟನಕಾರರು ಪೂರ್ವ ಜೆರುಸಲೇಮ್‌ನ ಖಾನ್ ಅಲ್-ಅಹ್ಮರ್ ಎಂಬಲ್ಲಿ ಬುಲ್‌ಡೋಝರೊಂದನ್ನು ತಡೆಯಲು ಯತ್ನಿಸಿದರು ಹಾಗೂ ಪೊಲೀಸರೊಂದಿಗೆ ಹೊಯ್‌ಕೈ ನಡೆಸಿದರು.

11 ಮಂದಿಯನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ.

ಘರ್ಷಣೆಯಲ್ಲಿ 35 ಮಂದಿ ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್ ರೆಡ್ ಕ್ರೆಸೆಂಟ್ ಹೇಳಿದೆ.

ಗ್ರಾಮಕ್ಕೆ ಹೋಗುವ ರಸ್ತೆಗಳನ್ನು ವಶಕ್ಕೆ ತೆಗೆದುಕೊಳ್ಳಲು ಸೈನಿಕರಿಗೆ ಅಧಿಕಾರ ನೀಡಲಾಗಿದೆ ಎನ್ನುವ ವಾರಂಟನ್ನು ಖಾನ್ ಅಲ್-ಅಹ್ಮರ್‌ನ 173 ನಿವಾಸಿಗಳಿಗೆ ಇಸ್ರೇಲ್ ಸೇನೆ ನೀಡಿದ ಬಳಿಕ ಈ ಘಟನೆ ನಡೆದಿದೆ.

ಗ್ರಾಮದ ಸುತ್ತ ಬುಧವಾರ ಭಾರೀ ಯಂತ್ರಗಳು ಕಂಡುಬಂದಿದ್ದು, ಗ್ರಾಮದ ಜನರನ್ನು ತೆರವುಗೊಳಿಸಲು ರಸ್ತೆ ನಿರ್ಮಾಣ ಕಾರ್ಯದಲ್ಲಿ ಇಸ್ರೇಲ್ ಸೇನೆ ತೊಡಗಿದೆ ಎಂಬ ಊಹಾಪೋಹಗಳು ಹರಡಿವೆ.

ಇಸ್ರೇಲ್‌ನಿಂದ ನಿರ್ಮಾಣ ಪರವಾನಿಗೆ ಸಿಗುವುದಿಲ್ಲ

ಈ ಗ್ರಾಮ ಮತ್ತು ಶಾಲೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಧ್ವಂಸಗೊಳಿಸುವುದನ್ನು ವಿರೋಧಿಸಿ ಸಲ್ಲಿಸಲಾಗಿರುವ ಕೊನೆಯ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮೇ ತಿಂಗಳಲ್ಲಿ ತಿರಸ್ಕರಿಸಿದೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳುತ್ತಾರೆ.

ಆದರೆ, ಇಸ್ರೇಲ್‌ನ ಕಟ್ಟಡ ನಿರ್ಮಾಣ ಪರವಾನಿಗೆಯಿಲ್ಲದೆಯೇ ನಿರ್ಮಾಣ ಕಾರ್ಯವನ್ನು ಮಾಡುವುದಲ್ಲದೆ ಫೆಲೆಸ್ತೀನಿಯರಿಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಹೋರಾಟಗಾರರು ಹೇಳುತ್ತಾರೆ.

ಯಾಕೆಂದರೆ, ಪಶ್ಚಿಮ ದಂಡೆಯ ಯಾವುದೇ ಭಾಗದಲ್ಲಿ ಫೆಲೆಸ್ತೀನಿಯರ ಕಟ್ಟಡ ನಿರ್ಮಾಣಕ್ಕೆ ಇಸ್ರೇಲ್ ಯಾವತ್ತೂ ಪರವಾನಿಗೆ ನೀಡುವುದಿಲ್ಲ ಎಂದು ಅವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News