ಮುರುಡೇಶ್ವರದ ಜನತಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಈದ್ ಸೌಹಾರ್ದ ಕೂಟ
ಭಟ್ಕಳ, ಜು. 5: ಇಸ್ಲಾಮ್ ಶಾಂತಿ ಮತ್ತು ನ್ಯಾಯದ ಸಂದೇಶವನ್ನು ಸಾರುವ ಧರ್ಮವಾಗಿದೆ. ಆದರೆ ದುರದೃಷ್ಟಾವಶಾತ್ ಇಂದು ಕೆಲವು ಮಾಧ್ಯಮಗಳು ಅದನ್ನು ಭಯೋತ್ಪಾದನೆಯೊಂದಿಗೆ ತಳಕು ಹಾಕುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕಾರ್ಯದರ್ಶಿ ರಿಯಾಝ್ ಆಹ್ಮದ್ ಹೇಳಿದರು.
ಅವರು ಮುರುಡೇಶ್ವರದ ಜನತಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಹ್ಯೂಮನ್ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಈದ್ ಸೌಹಾರ್ದ ಕೂಟ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಇಸ್ಲಾಮನ್ನು ಅರಿಯಲು ಪವಿತ್ರ ಕುರ್‌ಆನ್ ಹಾಗೂ ಪ್ರವಾದಿ ಮುಹಮ್ಮದ್(ಸ) ಅವರ ಜೀವನವನ್ನು ಅಧ್ಯಯನ ನಡೆಸಬೇಕು. ದೇವನ ದಾಸರನ್ನು ದ್ವೇಷಿಸಿ ದೇವನ ಸಾಮಿಪ್ಯವನ್ನು ಗಳಿಸಲು ಸಾಧ್ಯವಿಲ್ಲ. ಯಾರು ಮನುಷ್ಯರನ್ನು ಪ್ರೀತಿಸುತ್ತಾನೊ ದೇವನು ಕೂಡಾ ಅವನನ್ನು ಪ್ರೀತಿಸುವನು, ಆದ್ದರಿಂದ ನಾವೆಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳೋಣ ಎಂದು ಅವರು ಕರೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ ಭಟ್ಕಳ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಎಲ್ಲ ಧರ್ಮಗಳು ಮಾನವೀಯತೆಯ ಸಂದೇಶವನ್ನು ಸಾರುತ್ತವೆ ಆದ್ದರಿಂದ ನಾವು ಒಟ್ಟಿಗೆ ಬೆರೆತು ಜೀವನವನ್ನು ಸಾಗಿಸಬೇಕು. ಇದೇ ಸಂದರ್ಭದಲ್ಲಿ ಅವರು ತಮ್ಮ ನೆಚ್ಚಿನ ಕವಿತೆ ಅಲ್ಲಾಮಾ ಇಕ್ಬಾಲ್ ಅವರು ಬರೆದ ಲಬ್ ಪೇ ಆತಿ ಹೈ ದುವಾ ವನ್ನು ಹಾಡಿ ಅದರ ಮನಮುಟ್ಟುವ ರೀತಿಯಲ್ಲಿ ಕನ್ನಡ ದಲ್ಲಿ ಅನುವಾದಿಸಿದರು.
ಮುಖ್ಯ ಅತಿಥಿಗಳಾಗಿ ಆರ್‌ಎನ್‌ಎಸ್ ಸಮೋಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಎಂ.ವಿ. ಹೆಗಡೆ, ಆರ್‌ಎನ್‌ಎಸ್ ಆಸ್ಪತ್ರೆ ವ್ಯವಸ್ಥಾಪಕರಾದ ಎಸ್.ಎಸ್ ಕಾಮತ್ ಸಂದರ್ಭೋಚಿತವಾಗಿ ಮಾತನಾಡಿದರು.
ಹ್ಯೂಮನ್ ವೆಲ್‌ಫೇರ್ ಟ್ರಸ್ಟ್ ಅಧ್ಯಕ್ಷ ಡಾ. ಅಮೀನುದ್ದೀನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಹ್‌ಬಾರ್ ವಾಗ್ ಕುರ್‌ಆನ್ ಪಠಿಸಿದರು ರಯೀಸ್ ಆಹ್ಮದ್ ಕನ್ನಡಕ್ಕೆ ಅನುವಾದಿಸಿದರು. ಶಿಕ್ಷಕ ಇಮ್ತಿಯಾಝ್ ಮುಲ್ಲಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.