ಪ್ರಮೋದ್ ಮಾನಹಾನಿ ಪ್ರಕರಣ: ವಿಚಾರಣೆಗೆ ಟಿ.ಜೆ.ಅಬ್ರಹಾಂ ಗೈರು
ಉಡುಪಿ, ಜು.5: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ವಿರುದ್ಧ ಬೆಂಗಳೂರಿನ ಆರ್‌ಟಿಐ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಮಾನಹಾನಿಕರ ಹೇಳಿಕೆ ನೀಡಿದ ಕುರಿತ ಪ್ರಕರಣದ ವಿಚಾರಣೆಯನ್ನು ಉಡುಪಿಯ ಮೊದಲನೆ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ಆಗಸ್ಟ್ 25ಕ್ಕೆ ಮುಂದೂಡಿದೆ.
ಇಂದು ವಿಚಾರಣೆಗೆ ದಿನ ನಿಗದಿಯಾಗಿದ್ದು, ಅಬ್ರಹಾಂ ನ್ಯಾಯಾಲಯಕ್ಕೆ ಹಾಜರಾಗಲು ಅಸಾಧ್ಯವಾಗಿರುವ ಬಗ್ಗೆ ಅವರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿ ವಿಚಾರಣೆ ಮುಂದೂಡಲು ಮನವಿ ಮಾಡಿದರು. ಅದರಂತೆ ನ್ಯಾಯಾಧೀಶರು ವಿಚಾರಣೆಯನ್ನು ಆ.25ಕ್ಕೆ ನಿಗದಿಗೊಳಿಸಿದರು ಎಂದು ಪ್ರಮೋದ್ ಪರ ವಾದಿಸುತ್ತಿರುವ ನ್ಯಾಯವಾದಿ ಎಂ. ಶಾಂತಾರಾಮ್ ಶೆಟ್ಟಿ ತಿಳಿಸಿದ್ದಾರೆ.
ಪ್ರಮೋದ್ ಮಧ್ವರಾಜ್ 1.1 ಕೋ.ರೂ. ಮೌಲ್ಯದ ಆಸ್ತಿಗೆ 193 ಕೋಟಿ ರೂ. ಸಾಲ ಪಡೆದು ಅಕ್ರಮ ಎಸಗಿದ್ದಾರೆ ಹಾಗೂ ಬ್ಯಾಂಕಿನವರೊಂದಿಗೆ ಶಾಮೀಲಾಗಿ ವಂಚಿಸಿದ್ದಾರೆ ಎಂದು ಟಿ.ಜೆ. ಅಬ್ರಹಾಂ ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಅಲ್ಲದೆ ಈ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಆರ್‌ಬಿಐ ಮುಖ್ಯಸ್ಥರಿಗೂ ದೂರು ನೀಡಿದ್ದರು. ಇದರಿಂದ ತನ್ನ ತೇಜೋವಧೆ ಹಾಗೂ ಮಾನಹಾನಿಯಾಗಿದೆ ಎಂದು ಪ್ರಮೋದ್ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.