ಆಳ್ವಾಸ್ ಪ್ರಗತಿ ಉದ್ಯೋಗ ಮೇಳಕ್ಕೆಕ್ಯಾಂಪಸ್ ಸಜ್ಜು
ಮೂಡುಬಿದಿರೆ, ಜು.5: ಸಹಸ್ರಾರು ವಿದ್ಯಾರ್ಥಿಗಳಿಗೆ ಕಳೆದ 9 ವರ್ಷಗಳಿಂದ ಉದ್ಯೋಗ ಕಲ್ಪಿಸಿದ ಆಳ್ವಾಸ್ ಪ್ರಗತಿ 2018ಕ್ಕೆ ಮೂಡುಬಿದಿರೆ ವಿದ್ಯಾಗಿರಿ ಕ್ಯಾಂಪಸ್ ಸಜ್ಜುಗೊಂಡಿದ್ದು, ಗುರುವಾರ ಸಾಯಂಕಾಲದ ವೇಳೆಗೆ ಮೂರು ವಿದೇಶಿ ಕಂಪೆನಿಗಳು, 210 ಕಂಪೆನಿಗಳು ನೋಂದಣಿ ಮಾಡಿಕೊಂಡಿರುವ ಜೊತೆಗೆ 10,314 ಅಭ್ಯರ್ಥಿಗಳು ಅನ್‌ಲೈನ್ ನೋಂದಣಿ ಮಾಡಿಸಿಕೊಂಡಿದ್ದಾರೆ.
ಎಲ್‌ಇಡಿ ಸ್ಕ್ರೀನ್, ಸೂಚನಾ ಫಲಕಗಳ ಮೂಲಕ ಯಾವ ಕಂಪೆನಿಯವರು ಯಾವ ಕೊಠಡಿಯಲ್ಲಿ ಸಂದರ್ಶನ ನಡೆಸುತ್ತಿದೆ, ಯಾವ ವಿಭಾಗದ ಸಂದರ್ಶನ ಎನ್ನುವ ಸ್ಪಷ್ಟ ಮಾಹಿತಿ ನೀಡುವುದರಿಂದ ಎಲ್ಲೂ ಗೊಂದಲ ಆಗದ ರೀತಿಯಲ್ಲಿ ಆಯೋಜಿಸಲಾಗಿದೆ.
ಕಾಲೇಜಿನ 800 ಕೊಠಡಿಗಳಲ್ಲಿ ಸಂದರ್ಶನದ ವ್ಯವಸ್ಥೆ ಮಾಡಲಾಗಿದೆ. ಪ್ರತಿಹಂತದಲ್ಲೂ ಮಾಹಿತಿ, ಕಂಪನಿಗಳ ಜೊತೆ ಸಂವಹನ ನಡೆಸುವ ಉದ್ದೇಶದಿಂದ 1,200 ವಿದ್ಯಾರ್ಥಿ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ಮೂಡುಬಿದಿರೆ, ಕಾರ್ಕಳ ಹಾಗೂ ಮಂಗಳೂರಿನಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಉದ್ಯೋಗಕ್ಕೆ ಮಳೆಯ ಅಡ್ಡಿಯಾಗದಂತೆ ಪೂರಕ ಕ್ರಮಕೈಗೊಳ್ಳಲಾಗಿದೆ.