ಫ್ರಾನ್ಸ್ ಎದುರಿಸಲು ಉರುಗ್ವೆ ಸಜ್ಜು

Update: 2018-07-05 18:40 GMT

ನಿಝ್ನಿ ನವ್‌ಗ್ರೋಡ್, ಜು.5: ಇಲ್ಲಿ ಶುಕ್ರವಾರ ನಡೆಯಲಿರುವ 21ನೇ ಆವೃತ್ತಿಯ ಫಿಫಾ ವಿಶ್ವಕಪ್‌ನ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಫ್ರಾನ್ಸ್ ತಂಡ ಮತ್ತು ಉರುಗ್ವೆ ಮುಖಾಮುಖಿಯಾಗಲಿವೆ.

 ಉಭಯ ತಂಡಗಳು ಬಲಿಷ್ಠವಾಗಿದ್ದು, ಸಮಬಲದ ಹೋರಾಟ ನಿರೀಕ್ಷಿಸಲಾಗಿದೆ. ಫ್ರಾನ್ಸ್ ತಂಡದ 19ರ ಹರೆಯದ ಯುವ ಆಟಗಾರ ಕೈಲಿಯನ್ ಬಾಪೆ ಉರುಗ್ವೆಗೆ ಕಠಿಣ ಸವಾಲೊಡ್ಡುವುದನ್ನು ನಿರೀಕ್ಷಿಸಲಾಗಿದೆ. ಬಾಪೆಯನ್ನು ಕಟ್ಟಿ ಹಾಕಲು ಉರುಗ್ವೆ ಯೋಚಿಸುತ್ತಿದೆ.

 ಡಿಯಾಗೊ ಗೊಡಿನ್ ನಾಯಕರಾಗಿರುವ ಉರುಗ್ವೆ ತಂಡದಲ್ಲಿ ಸ್ಟಾರ್ ಆಟಗಾರ ಲೂಯಿಸ್ ಸುಯರೆಝ್ ಮತ್ತು ಸ್ಟ್ರೈಕರ್ ಎಡಿನ್ಸನ್ ಕವಾನಿ ಫ್ರಾನ್ಸ್ ತಂಡವನ್ನು ಎದುರಿಸಲು ತಯಾರಿ ನಡೆಸಿದ್ದಾರೆ.

 ಉರುಗ್ವೆ ಗೋಲು ಕೀಪರ್ ಫೆರ್ನಾಂಡೊ ಮುಸ್ಲೆರಾ ಅವರ ಡಿಫೆನ್ಸ್ ಅತ್ಯುತ್ತಮವಾಗಿದೆ. ಕಳೆದ 4 ಪಂದ್ಯಗಳಲ್ಲಿ ಮುಸ್ಲೆರಾ ಕಣ್ಣು ತಪ್ಪಿಸಿ ಒಬ್ಬ ಮಾತ್ರ ಗೋಲು ದಾಖಲಿಸಿದ್ದಾರೆ. ಅವರೆಂದರೆ ಪೋರ್ಚುಗಲ್‌ನ ಪೆಪೆ. ಪೆಪೆ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ 1 ಗೋಲು ಜಮೆ ಮಾಡಿದ್ದರು. ಉರುಗ್ವೆಯಂತೆ ಎದುರಾಳಿಗೆ ಕೇವಲ 1 ಗೋಲು ಬಿಟ್ಟುಕೊಟ್ಟ ತಂಡ ಬ್ರೆಝಿಲ್.

ಆದರೆ ಫ್ರಾನ್ಸ್‌ನ ಡಿಫೆನ್ಸ್ ಅಷ್ಟೊಂದು ಬಲಿಷ್ಠವಾಗಿಲ್ಲ. 4 ಪಂದ್ಯಗಳಲ್ಲಿ ಎದುರಾಳಿ ತಂಡಗಳಿಗೆ 4 ಗೋಲು ಬಿಟ್ಟುಕೊಟ್ಟಿತ್ತು. ಅರ್ಜೆಂಟೀನ ವಿರುದ್ಧ ಪ್ರಯಾಸದ ಜಯ ದಾಖಲಿಸಿತ್ತು. ಬಾಪೆ ಅವಳಿ ಗೋಲು ಫ್ರಾನ್ಸ್ ಗೆ ಕ್ವಾರ್ಟರ್ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿತ್ತು. ಫ್ರಾನ್ಸ್ ತಂಡ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಡೆನ್ಮಾರ್ಕ್ ವಿರುದ್ಧ ಗೋಲುರಹಿತ ಡ್ರಾ ಮಾಡಿಕೊಂಡಿತ್ತು. ಇದು ಈ ಬಾರಿಯ ವಿಶ್ವಕಪ್‌ನಲ್ಲಿ ದಾಖಲಾಗಿದ್ದ ಮೊದಲ ಗೋಲುರಹಿತ ಡ್ರಾ ಆಗಿತ್ತು.

   ಉಭಯ ತಂಡಗಳು ಕೂಟದಲ್ಲಿ 4 ಪಂದ್ಯಗಳಲ್ಲಿ ತಲಾ 7 ಗೋಲು ದಾಖಲಿಸಿವೆ. ಫ್ರಾನ್ಸ್ ತಂಡ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯದ 1 ಸೆಲ್ಫ್ ಗೋಲು ನೆರವಿನಲ್ಲಿ 2-1 ಗೆಲುವಿನೊಂದಿಗೆ ವಿಶ್ವಕಪ್‌ನಲ್ಲಿ ಅಭಿಯಾನ ಆರಂಭಿಸಿತ್ತು. ಉರುಗ್ವೆಗೆ ರಶ್ಯಾ ವಿರುದ್ಧದ ಪಂದ್ಯದಲ್ಲಿ ಸೆಲ್ಫ್ ಗೋಲು ಉಡುಗೊರೆ ಸಿಕ್ಕಿದೆ.

ಪಂದ್ಯ ನಡೆಯುವ ಕ್ರೀಡಾಂಗಣ: ನಿಝ್ನಿ ನೊವ್‌ಗ್ರೋಡ್ , ಆಸನಗಳ ಸಾಮರ್ಥ್ಯ 45,000

ಪಂದ್ಯದ ಸಮಯ: ರಾತ್ರಿ 7:30ಕ್ಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News