ಬೆಲ್ಜಿಯಮ್‌ನಲ್ಲಿ ಮುಸ್ಲಿಮ್ ಮಹಿಳೆಯ ಮೇಲೆ ಅಮಾನುಷ ಹಲ್ಲೆ

Update: 2018-07-06 18:18 GMT

ಬ್ರಸೆಲ್ಸ್ (ಬೆಲ್ಜಿಯಮ್), ಜು. 6: ಬೆಲ್ಜಿಯಮ್ ರಾಜಧಾನಿ ಬ್ರಸೆಲ್ಸ್ ಸಮೀಪದ ಆ್ಯಂಡರ್‌ಲ್ಯೂಸ್ ಎಂಬ ಪಟ್ಟಣದಲ್ಲಿ ಇಬ್ಬರು ವ್ಯಕ್ತಿಗಳು ಮುಸ್ಲಿಮ್ ಮಹಿಳೆಯೊಬ್ಬರ ಮೇಲೆ ಜನಾಂಗೀಯ ದ್ವೇಷದಿಂದ ಅಮಾನುಷ ಹಲ್ಲೆ ನಡೆಸಿದ್ದಾರೆ ಎಂದು ಬೆಲ್ಜಿಯಮ್‌ನ ಮಾಧ್ಯಮಗಳು ವರದಿ ಮಾಡಿವೆ.

19 ವರ್ಷದ ಮಹಿಳೆಯು ಸ್ಥಳೀಯ ಸಮಯ ರಾತ್ರಿ 11 ಗಂಟೆಯ ವೇಳೆಗೆ ಎರಡು ಕಟ್ಟಡಗಳ ನಡುವಿನ ಕಿರಿದಾದ ದಾರಿಯಲ್ಲಿ ನಡೆಯುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ದಾರಿಗೆ ಅಡ್ಡವಾಗಿ ನಿಂತಿದ್ದರು ಎಂದು ಬೆಲ್ಜಿಯಮ್‌ನ ಅಧಿಕೃತ ಸುದ್ದಿ ಸಂಸ್ಥೆ ‘ಬೆಲ್ಜ’ ವರದಿ ಮಾಡಿದೆ.

ಆ ವ್ಯಕ್ತಿಗಳು ಮಹಿಳೆಯ ಶಿರವಸ್ತ್ರವನ್ನು ಎಳೆದು, ಅಂಗಿಯನ್ನು ಹರಿದು ಹಾಕಿದರು ಎಂದು ಅದು ಹೇಳಿದೆ.

ಮಹಿಳೆಯು ತಪ್ಪಿಸಿಕೊಳ್ಳಲು ಯತ್ನಿಸಿದಾಗ ದುಷ್ಕರ್ಮಿಗಳು ಜನಾಂಗೀಯವಾಗಿ ನಿಂದಿಸಿದರು ಹಾಗೂ ಕೆಳಗೆ ಉರುಳಿಸಿದರು ಎನ್ನಲಾಗಿದೆ. ಬಳಿಕ ಚೂಪಾದ ವಸ್ತುವೊಂದರಿಂದ ಆಕೆಯ ಹೊಟ್ಟೆ, ಕಾಲುಗಳಲ್ಲಿ ಶಿಲುಬೆಯನ್ನು ಕೊರೆದರು.

ನಂತರ ಅವರು ಅಲ್ಲಿಂದ ತಪ್ಪಿಸಿಕೊಂಡರು. ಮಹಿಳೆಯ ಆರೋಗ್ಯ ಸ್ಥಿತಿಯ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ.

ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News