×
Ad

ನೂರಾರು ಮನೆಗಳು ಜಲಾವೃತ: 350ಕ್ಕೂ ಅಧಿಕ ಮಂದಿಯ ರಕ್ಷಣೆ

Update: 2018-07-07 21:06 IST

ಉಡುಪಿ, ಜು.7: ಉಡುಪಿ ಜಿಲ್ಲೆಯಾದ್ಯಂತ ವರುಣನ ಅರ್ಭಟ ಶನಿವಾರವೂ ಮುಂದುವರೆದಿದ್ದು, ಇದರಿಂದ ಜಿಲ್ಲೆಯ ಹಲವು ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿ ನೂರಾರು ಮನೆಗಳು ಜಲಾವೃತಗೊಂಡವು. ಅಪಾಯಕಾರಿ ಸ್ಥಳಗಳಲ್ಲಿ ಸಿಲುಕಿಕೊಂಡ ಸುಮಾರು 350ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿ ತಾಲೂಕಿನಲ್ಲಿ 197.6 ಮೀ. ಮೀ., ಕುಂದಾಪುರ ತಾಲೂಕಿನಲ್ಲಿ 118.5 ಮೀ.ಮೀ. ಹಾಗೂ ಕಾರ್ಕಳ ತಾಲೂಕಿನಲ್ಲಿ 196.3 ಮೀ.ಮೀ. ಮತ್ತು ಜಿಲ್ಲೆಯಲ್ಲಿ ಸರಾಸರಿ 170.8 ಮೀ.ಮೀ. ಮಳೆಯಾಗಿದೆ.

ಇದರಿಂದಾಗಿ ಉಡುಪಿ ತಾಲೂಕಿನ ಮಜೂರು, ಮಲ್ಲಾರು, ಕಟಪಾಡಿ ಕಲ್ಲಾಪು, ಮೂಡುಬೆಳ್ಳೆ, ಶಿರ್ವ ಸಮೀಪದ ಸೂಡಾ ಪಲಿಮಾರು, ಉದ್ಯಾವರ, ನಗರದ ಕೊಡಂಕೂರು ವಾರ್ಡ್ ವ್ಯಾಪ್ತಿಯಲ್ಲಿ ಕೃತಕ ನೆರೆ ಉಂಟಾಗಿದ್ದು, ಹಲವು ಮನೆಗಳು ಜಲಾವೃತಗೊಂಡವು. ಇದರಿಂದ ಈ ಪ್ರದೇಶಗಳಲ್ಲಿನ ಜನಜೀನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಜಿಲ್ಲಾಡಳಿತದ ನೇತೃತ್ವದಲ್ಲಿ ಕಂದಾಯ, ಪಂಚಾಯತ್‌ರಾಜ್, ಅಗ್ನಿಶಾಮಕ ದಳ ಅಧಿಕಾರಿಗಳು ಪರಿಹಾರ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಅಪರ ಜಿಲ್ಲಾಧಿಕಾರಿ ಅನುರಾಧ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಉಸ್ತುವಾರಿ ನಡೆಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ಕಟಪಾಡಿ ಕಲ್ಸಂಕ ಕಲ್ಲಾಪು ಬಳಿ ನೀರಿನಿಂದ ಆವೃತಗೊಂಡ ಮನೆಯಿಂದ ಬಾಣಂತಿ ಯೊಬ್ಬರನ್ನು ರಕ್ಷಿಸಿ ಹೊರ ಕರೆ ತರಲಾಯಿತು. ಮಜೂರು ಗ್ರಾಮದಲ್ಲಿ ಜಲಾ ವೃತಗೊಂಡ ಮನೆಗಳಿಂದ ಸುಮಾರು 35 ಜನರನ್ನು ರಕ್ಷಿಸಿ, ಗ್ರಾಪಂನಿಂದ ನಿರ್ಮಿಸಿದ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಮೂಡುಬೆಳ್ಳೆ ಗ್ರಾಮದಲ್ಲೂ ಕೂಡ 5-6 ಕುಟುಂಬಗಳನ್ನು ಬೋಟುಗಳನ್ನು ಕಳುಹಿಸಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬರಲಾಯಿತು. ತೆಂಕ ಗ್ರಾಮದಲ್ಲಿ ಕೃತಕ ನೆರೆ ಸೃಷ್ಠಿಯಾಗಿದ್ದು, ಯುಪಿಸಿಎಲ್ ಮೂಲಕ ತಡೆ ನಿವಾರಣೆಗೊಳಿಸಿ ನೀರನ್ನು ಹರಿದು ಹೋಗಲು ಕ್ರಮ ವಹಿಸಲಾಯಿತು.

ಕಾಪು ಉಳಿಯಾರಗೋಳಿಯಲ್ಲಿ ಮಳೆ ನೀರಿನಿಂದ ಆವೃತವಾದ ನಾಲ್ಕು ಮನೆಗಳಲ್ಲಿನ ಸದಸ್ಯರನ್ನು ಸ್ಥಳಾಂತರಿಸಲಾಯಿತು. ಮಲ್ಲಾರು ಗ್ರಾಮದಲ್ಲಿ 28 ಕುಟುಂಬಗಳನ್ನು ರಕ್ಷಿಸಿ ಅವರ ಸಂಬಂಧಿಕ ಮನೆಗಳಿಗೆ ಕಳುಹಿಸಿಕೊಡಲಾಯಿತು. ಕಾಪು ಪುರಸಭಾ ಮುಖ್ಯಾಧಿಕಾರಿ ರಾಯಪ್ಪ ಮತ್ತು ಕಾಪು ತಹಶೀಲ್ದಾರ್ ಗುರುಸಿದ್ದಯ್ಯ ನೇತೃತ್ವದಲ್ಲಿ ಪರಿಹಾರ ಕಾರ್ಯವನ್ನು ರೂಪಿಸಲಾಯಿತು. ಪಲಿಮಾರು, ಕಟ್ಟಿಂಗೇರಿಯ ನೆರೆ ಪೀಡಿತ ಪ್ರದೇಶಗಳಲ್ಲಿ ಸಿಲುಕಿದ ಜನರನ್ನು ರಕ್ಷಿಸಲಾಯಿತು

ಬಹುತೇಕ ಶಾಲೆಗಳಿಗೆ ರಜೆ

ಬೆಳಗ್ಗೆಯಿಂದ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶಾಲೆಗೆ ರಜೆ ಘೋಷಣೆ ಮಾಡದಿದ್ದರೂ, ಮಳೆಯ ತೀವ್ರತೆಗೆ ಅನುಗುಣವಾಗಿ ಆಯಾ ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ನೀಡುವಂತೆ ಶಿಕ್ಷಣಾಧಿಕಾರಿ ಗಳು, ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಆಡಳಿತ ಸಮಿತಿಗಳಿಗೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು. ಅದರಂತೆ ಇಂದು ಹಲವು ಕಡೆಗಲ್ಲಿ ಶಾಲೆಗಳಿಗೆ ರಜೆ ನೀಡಲಾಯಿತು

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಆಗಮನ

ಜಿಲ್ಲೆಯಾದ್ಯಂತ ಕೃತಕ ನೆರೆ ಸೃಷ್ಠಿಯಾಗಿರುವುದರಿಂದ ತುರ್ತು ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಇಂದು ರಾತ್ರಿ ವೇಳೆ ಉಡುಪಿಗೆ ಆಗಮಿಸಿದೆ.

ಸುಮಾರು 30 ಮಂದಿಯ ಈ ತಂಡವು ಕುಂದಾಪುರ, ಕಾರ್ಕಳ ತಾಲೂಕು ಮತ್ತು ಉಡುಪಿ ತಾಲೂಕಿನ ಉಡುಪಿ ಹಾಗೂ ಕಾಪು ಪ್ರದೇಶಗಳಲ್ಲಿ ಕಾರ್ಯಾ ಚರಿಸಲಿದೆ. ಈ ತಂಡದಲ್ಲಿ ನೆರೆಪೀಡಿತ ಪ್ರದೇಶಗಳಲ್ಲಿ ಅಪಾಯದಲ್ಲಿ ಸಿಲುಕಿದ ವರನ್ನು ರಕ್ಷಿಸಲು ಬೇಕಾದ ಬೋಟು ಸೇರಿದಂತೆ ಎಲ್ಲ ವ್ಯವಸ್ಥೆಗಳಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News