×
Ad

ಮಂಗಳೂರಿನಲ್ಲಿ ಮುಂದುವರಿದ ಭಾರೀ ಮಳೆ: ಹಲವೆಡೆ ಮರಗಳು ಧರಾಶಾಹಿ; ಅಪಾರ ಹಾನಿ

Update: 2018-07-07 21:56 IST

ಮಂಗಳೂರು, ಜು.7: ನಗರದಲ್ಲಿ ದಿನಗಳಿಂದ ಮಳೆ ಚುರುಕುಗೊಂಡಿದ್ದು, ಶುಕ್ರವಾರದಿಂದ ಸುರಿಯಲು ಪ್ರಾರಂಭಿಸಿದ ಮಳೆ ಶನಿವಾರವೂ ಮುಂದುವರಿದಿದೆ. ಹೆಚ್ಚಿನ ಮಳೆ ನೀರಿನ ಪ್ರಮಾಣದಿಂದಾಗಿ ರಸ್ತೆಗಳು ಕರೆಗಳಂತೆ ಭಾಸವಾಗುತ್ತಿವೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮರವೂರು ರಸ್ತೆಯು ಕುಸಿದಿದೆ. ಇದರಿಂದ ಹಲವು ಮರಗಳು ಧರಾಶಾಹಿಯಾಗಿವೆ. ಕುಸಿತಗೊಂಡ ರಸ್ತೆಯು ಅಪಾಯಕಾರಿಯಾಗಿ ಪರಿಣಮಿಸಿದ್ದು, ಅಪಘಾತ ತಡೆಗಾಗಿ ಕಂಬಗಳನ್ನು ನೆಟ್ಟು, ಬ್ಯಾರಿಕೇಡ್‌ಗಳನ್ನು ಇಡಲಾಗಿದೆ. ವಾಹನ ಸಂಚಾರದಲ್ಲಿ ಅಸ್ತವ್ಯಸ್ಥಗೊಂಡಿದೆ. ಮತ್ತೆ ರಸ್ತೆ ಕುಸಿಯುವ ಭೀತಿಯಿದ್ದು, ಸಾರ್ವಜನಿಕರು ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಉರ್ವ ಬಳಿಯ ಗಾಂಧಿನಗರದಲ್ಲಿ ಸರಕಾರಿ ಶಾಲೆಯ ಕಂಪೌಂಡ್ ಕುಸಿದಿದೆ. ಬಾವುಟೆಗುಡ್ಡ ಸಮೀಪದ ಸಾರ್ವಜನಿಕರ ಕೇಂದ್ರ ಗ್ರಂಥಾಲಯ ಸಮೀಪದ ಗೋಡೆಯೊಂದು ಕುಸಿದಿದೆ.

ಮಣ್ಣಗುಡ್ಡ ಸಮೀಪದಲ್ಲಿ ಬೃಹತ್ ಮರವೊಂದರ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದು ವಿದ್ಯುತ್ ಸಂಚಾರದಲ್ಲಿ ಕೆಲಹೊತ್ತು ವ್ಯತ್ಯಯ ಉಂಟಾಗಿತ್ತು. ವಾಹನ ಸಂಚಾರದಲ್ಲೂ ಕೆಲಹೊತ್ತು ಗೊಂದಲ ಉಂಟಾಗಿ ವಾಹನ ಸವಾರರು, ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ, ಮೆಸ್ಕಾಂ ಸಿಬ್ಬಂದಿ ಮರದ ಕೊಂಬೆಗಳನ್ನು ತೆರವುಗೊಳಿಸಿದರು.

ತಾಲೂಕಿನ ಸೂರಿಂಜೆ, ಶಿಬರೂರು ಬಳಿ ನದಿಯಲ್ಲಿ ನೀರಿನ ಹರಿವು ಪ್ರಮಾಣ ಏರಿಕೆಯಾಗಿದೆ. ಈ ಪ್ರದೇಶದಲ್ಲಿದ್ದ 18 ಮಂದಿಯನ್ನು ದೋಣಿಗಳ ಮೂಲಕ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು, ಮಕ್ಕಳು, ವೃದ್ಧರು ಮಹಿಳೆಯರು ಇದ್ದರು. ಎಲ್ಲರನ್ನೂ ರಕ್ಷಿಸಲಾಗಿದೆ.
ಭಾರೀ ಮಳೆಯಿಂದಾಗಿ ಮೂಲ್ಕಿಯ ಮಾನಂಪಾಡಿ ಗ್ರಾಮದ ಹೊರವವಲಯದಲ್ಲಿ ತೆಂಗಿನ ತೋಟವೊಂದರಲ್ಲಿ 2-3 ಅಡಿಗಳ ಎತ್ತರಕ್ಕೆ ಮಳೆನೀರು ನಿಂತಿದೆ.

ನಗರದ ತಗ್ಗು ಪ್ರದೇಶಗಳಾದ ಕೊಟ್ಟಾರಚೌಕಿ, ಕೂಳೂರು, ಜೆಪ್ಪಿನಮೊಗರು, ಪಂಪ್‌ವೆಲ್, ಉಳ್ಳಾಲ ಸೇತುವೆ ಆಸುಪಾಸಿನ ಪ್ರದೇಶದಲ್ಲಿ ಮಳೆನೀರು ನಿಂತಿದೆ. ಕೆಲವೆಡೆ ಮಳೆನೀರಿನ ಪ್ರವಾಹ ಉಂಟಾಗಿದೆ. ರಸ್ತೆ-ಚಂರಂಡಿಗಳು ತುಂಬಿ ಹರಿಯುತ್ತಿವೆ. ಏತನ್ಮಧ್ಯೆ ರಕ್ಷಣಾ ಕಾರ್ಯವೂ ಸಮರೋಪಾದಿಯಲ್ಲಿ ನಡೆದಿದೆ.

ಗುರುಪುರ ಬಂಗ್ಲೆಗುಡ್ಡೆಯಲ್ಲಿ ಭೂಕುಸಿತ; ಮನೆಗೆ ಅಪಾಯ

ತಾಲೂಕಿನ ಗುರುಪುರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುರುಪುರಕ್ಕೆ ಹತ್ತಿದ ಬಂಗ್ಲೆಗುಡ್ಡೆಯ ಮಸೀದಿಗೆ ಹತ್ತಿರದ ಮನೆಗಳ ಪಕ್ಕದಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಜೊತೆಗೆ ಹಲವು ಗಿಡ-ಮರಗಳು ಧರಾಶಾಹಿಗಳಾಗಿವೆ. ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಭೂಕುಸಿತ ಹೆಚ್ಚಾದಲ್ಲಿ ಮೇಲ್ಭಾಗದಲ್ಲಿರುವ ಮನೆಗಳು ಕುಸಿದು ಬೀಳುವ ಅಪಾಯವಿದೆ. ಸ್ಥಳಕ್ಕೆ ಭೇಟಿ ನೀಡಿದ ಗುರುಪುರ ಗ್ರಾಪಂ ಅಧ್ಯಕ್ಷೆ ರುಕಿಯಾ, ಉಪಾಧ್ಯಕ್ಷ ಜಿ.ಎಂ. ಉದಯ ಭಟ್, ಪಿಡಿಒ ಅಬೂಬಕ್ಕರ್, ಜಿಪಂ ಸದಸ್ಯ ಯು.ಪಿ. ಇಬ್ರಾಹೀಂ, ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಇಲ್ಲಿ ತಡೆಗೋಡೆ ನಿರ್ಮಿಸುವ ಅಗತ್ಯದ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News