×
Ad

ಲೋಕಸಭಾ ಚುನಾವಣೆಗೆ ಸಿದ್ಧರಾಗಿ: ವಿಷ್ಣುನಾಥ್ ಕರೆ

Update: 2018-07-07 22:20 IST

ಮಂಗಳೂರು, ಜು.7: ಸೋಲು ಶಾಶ್ವತವಲ್ಲ, ಗೆಲುವು ಮರೀಚಿಕೆಯೂ ಅಲ್ಲ. ಇಂದಿರಾಗಾಂಧಿಯ ಕಾಲದಲ್ಲೂ ಸೋತಿದ್ದ ಕಾಂಗ್ರೆಸ್ ಮತ್ತೆ ತಲೆ ಎತ್ತಿ ನಿಂತು ದೇಶಕ್ಕೆ ಒಳ್ಳೆಯ ಆಡಳಿತ ನೀಡಿದೆ. ವಿಧಾನಸಭೆಯ ಚುನಾವಣಾ ಫಲಿತಾಂಶದ ಸೋಲಿನಿಂದ ಎದೆಗುಂದದೆ ಸವಾಲಾಗಿ ಸ್ವೀಕರಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲಬೇಕು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಪಿ.ಸಿ. ವಿಷ್ಣುನಾಥ್ ಕರೆ ನೀಡಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ನಡೆದ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ಗೆ ಅಭಿವೃದ್ಧಿ ಕಾರ್ಯಕ್ರಮಗಳೇ ಶ್ರೀರಕ್ಷೆಯಾಗಿದೆ. ವಿರೋಧಿಗಳಿಗೆ ಅಪಪ್ರಚಾರವೇ ಮಂತ್ರ. ನಾವು ಅಪಪ್ರಚಾರವನ್ನು ಅಭಿವೃದ್ಧಿಯಿಂದಲೇ ಗೆಲ್ಲಬೇಕು. ಪಕ್ಷದ ಪ್ರಚಾರದ ತಂತ್ರಗಾರಿಕೆಯನ್ನು ಚುರುಕುಗೊಳಿಸಬೇಕು. ಪ್ರತೀ ಮನೆಯ ಪ್ರತೀ ವ್ಯಕ್ತಿಯಲ್ಲೂ ಕಾಂಗ್ರೆಸ್ ನೆಲೆಯೂರಬೇಕು ಎಂದು ವಿಷ್ಣುನಾಥ್ ನುಡಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಹಾಗೂ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಶೇಕಡಾವಾರು ಮತಗಳಿಕೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಶೇ.38ರಷ್ಟು ಮತ ಗಳಿಸುವುದರೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಹಾಗಾಗಿ ಮುಂದಿನ ಚುನಾವಣೆಗೆ ಅಗತ್ಯವಾಗಿರುವ ಪೂರ್ವ ಸಿದ್ಧತೆಗಳಿಗೆ ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಜಿಲ್ಲೆಯಲ್ಲಿ 7 ಮಂದಿ ಕಾಂಗ್ರೆಸ್ ಶಾಸಕರಿದ್ದಾಗ ಸಾವಿರಾರು ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಕ್ರಮ ನೀಡಿದೆ. ಮುಂದಿನ ದಿನಗಳಲ್ಲಿ ಜನತೆ ಅದನ್ನು ಸ್ಮರಿಸಿಕೊಳ್ಳುವರು ಎಂದರು.

ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಜೆ.ಆರ್ ಲೋಬೊ, ಶಕುಂತಳಾ ಶೆಟ್ಟಿ, ಮೊಯ್ದಿನ್ ಬಾವಾ, ದ.ಕ. ಜಿಲ್ಲಾ ಕಾಂಗ್ರೆಸ್ ಮಾಜಿ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮೇಯರ್ ಕೆ.ಭಾಸ್ಕರ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಬಿ.ಎಚ್ ಖಾದರ್, ಪಕ್ಷದ ಮುಖಂಡರಾದ ಪಿ.ವಿ. ಮೋಹನ್, ಮಮತಾ ಗಟ್ಟಿ, ಜಿ.ಎ. ಬಾವಾ, ಪುರುಪೋತ್ತಮ ಚಿತ್ರಾಪುರ, ಎಂ.ಎಸ್. ಮುಹಮ್ಮದ್, ನವೀನ್ ಡಿಸೋಜ, ಸದಾಶಿವ ಉಳ್ಳಾಲ್, ಸುರೇಶ್ ಬಲ್ಲಾಳ್, ಆರ್.ಕೆ ಪೃಥ್ವಿರಾಜ್, ಕವಿತಾ ಸನಿಲ್, ಶಶಿಧರ್ ಹೆಗ್ಡೆ, ಆಶಾ ಡಿಸಿಲ್ವಾ, ವೆಂಕಪ್ಪಗೌಡ, ಎ.ಸಿ ಭಂಡಾರಿ, ನೀರಜ್‌ಪಾಲ್, ಯು.ಎಚ್ ಖಾಲಿದ್, ಆರೀಫ್ ಬಾವ, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

ಸಂತೋಷ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಬಿ.ಎ. ಮುಹಮ್ಮದ್ ಹನೀಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News