ಮಧ್ಯಪ್ರಾಚ್ಯದ ಸ್ಥಿರತೆಗೆ ಇರಾನ್ ಶ್ರಮಿಸಲಿ: ಚೀನಾ ಸಹಾಯಕ ವಿದೇಶ ಸಚಿವ

Update: 2018-07-07 18:03 GMT

ಬೀಜಿಂಗ್, ಜು. 7: ಮಧ್ಯಪ್ರಾಚ್ಯದಲ್ಲಿ ಸ್ಥಿರತೆ ಸಾಧಿಸಲು ಇರಾನ್ ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕು ಹಾಗೂ ತನ್ನ ನೆರೆ ದೇಶಗಳೊಂದಿಗೆ ಹೊಂದಿಕೊಂಡು ಹೋಗಬೇಕು ಎಂದು ಚೀನಾದ ಹಿರಿಯ ರಾಜತಾಂತ್ರಿಕರೊಬ್ಬರು ಶುಕ್ರವಾರ ಹೇಳಿದ್ದಾರೆ.

ಹೋರ್ಮಝ್ ಜಲಸಂಧಿಯಲ್ಲಿ ಸಾಗುವ ತೈಲ ಹಡಗುಗಳನ್ನು ತಾನು ತಡೆಯಬಹುದು ಎಂಬುದಾಗಿ ಇರಾನ್‌ನ ‘ರೆವಲೂಶನರಿ ಗಾರ್ಡ್ಸ್’ ಸೇನೆ ನೀಡಿರುವ ಎಚ್ಚರಿಕೆಗೆ ಚೀನಾ ಈ ಪ್ರತಿಕ್ರಿಯೆ ನೀಡಿದೆ.

ಸೌದಿ ಅರೇಬಿಯ, ಇರಾಕ್ ಮತ್ತು ಕುವೈತ್ ಚೀನಾದ ಅತ್ಯಂತ ಪ್ರಮುಖ ತೈಲ ಪೂರೈಕೆದಾರರಾಗಿದ್ದಾರೆ. ಹಾಗಾಗಿ, ಈ ಜಲಸಂಧಿಯಲ್ಲಿ ಉಂಟಾಗುವ ಯಾವುದೇ ಅಡೆತಡೆಯು ಅದರ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಇರಾನ್‌ನ ತೈಲ ರಫ್ತುಗಳನ್ನು ನಿಲ್ಲಿಸಲು ಅಮೆರಿಕ ಪ್ರಯತ್ನಿಸಿದರೆ, ಕೊಲ್ಲಿ ದೇಶಗಳಿಂದ ಹೋಗುವ ತೈಲ ಹಡಗುಗಳನ್ನು ನಿಲ್ಲಿಸುವ ಬೆದರಿಕೆಯನ್ನು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಮತ್ತು ಕೆಲವು ಹಿರಿಯ ಸೇನಾ ಕಮಾಂಡರ್‌ಗಳು ಹಾಕಿರುವುದನ್ನು ಸ್ಮರಿಸಬಹುದಾಗಿದೆ.

‘‘ವಲಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಾತರಿಪಡಿಸಲು ಇರಾನ್ ಹೆಚ್ಚಿನದನ್ನು ಮಾಡಬೇಕು ಎಂದು ಚೀನಾ ಭಾವಿಸಿದೆ’’ ಎಂದು ಚೀನಾದ ಸಹಾಯಕ ವಿದೇಶ ಸಚಿವ ಚೆನ್ ಕ್ಸಿಯಾವೊಡಾಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News