ಉಡುಪಿ: ಸುಗಮ ಸಂಗೀತ ಗೀತಗಾಯನ ಸ್ಪರ್ಧೆ ಉದ್ಘಾಟನೆ
ಉಡುಪಿ, ಜು.8: ಯಾಂತ್ರಿಕ ಬದುಕಿನ ನಡುವೆ ಯುವಮನಸ್ಸುಗಳನ್ನು ಸಂಗೀತ ಹೆಚ್ಚು ಹೆಚ್ಚು ಆಕರ್ಷಿಸುತ್ತಿದ್ದು, ಪ್ರಸ್ತುತ ವಿವಿಧ ಮಾಧ್ಯಮಗಳಲ್ಲಿ ಸಂಗೀತ ಕಲಾಪ್ರತಿಭೆಗಳಿಗೆ ಸಾಕಷ್ಟು ಅವಕಾಶಗಳು ಲಭಿಸುತ್ತಿವೆ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ, ಶಿಸ್ತು ಬದ್ಧ ಜೀವನವನ್ನು ರೂಡಿಸಿಕೊಳ್ಳಬೇಕು ಎಂದು ಉಡುಪಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಹೇಳಿದ್ದಾರೆ.
ಕಟಪಾಡಿ ದಿಶಾ ಕಮ್ಯೂನಿಕಷನ್ಸ್ ಟ್ರಸ್ಟ್, ಕಲಾನಿಧಿ ಸಾಂಸ್ಕೃತಿಕ ಕಲಾ ಪ್ರಕಾರಗಳ ಸಂಸ್ಥೆ, ರಾಗವಾಹಿನಿ ಉಡುಪಿ, ಅಂಬಲಪಾಡಿ ಜನಾದರ್ನ ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ರವಿವಾರ ದೇವಸ್ಥಾನದಲ್ಲಿ ಏರ್ಪಡಿಸ ಲಾದ ನನ್ನ ಹಾಡು ನನ್ನದು ಸೀಸನ್-2 ಸುಗಮ ಸಂಗೀತ ಗೀತಗಾಯನ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ನಾದವೈಭವಂ ವಾಸುದೇವ ಭಟ್ ಮಾತನಾಡಿ, ಸುಗಮ ಸಂಗೀತದ ಮೂಲಕ ಅನೇಕ ದಾಸವರೇಣ್ಯರ, ಸಾಹಿತಿಗಳ ಸಾಹಿತ್ಯದೊಳಗೆ ಅಡಗಿರುವ ಜೀವನಸತ್ಯವನ್ನು ಅರಿಯಲು ಸಾಧ್ಯ ವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬಡಗುಬೆಟ್ಟು ಸೊಸೈಟಿ ಪ್ರಧಾನ ವ್ಯವಸ್ಥಾಪಕ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಮೂಡುಸಗ್ರಿ ಶ್ರೀದುರ್ಗಾ ಆದಿಶಕ್ತಿ ದೇವಸ್ಥಾನದ ಮೇಲುಸ್ತುವಾರಿ ಕುಸುಮ ನಾಗರಾಜ್ ಆಚಾರ್ಯ, ಸಾಹಿತಿ ಪ್ರಕಾಶ ಆಚಾರ್ಯ ವಡ್ಡರ್ಸೆ, ಉಡುಪಿ ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಕಿದಿಯೂರು ಶುಭಾ ಶಂಸನೆಗೈದರು. ಶಿರ್ವ ರೋಟರಿ ಅಧ್ಯಕ್ಷ ದಯಾನಂದ ಶೆಟ್ಟಿ ದೆಂದೂರು, ನಟರಾಜ್ ಮೇಲಂಟ, ಕಲಾವಿದ ಸುರೇಶ್ ಲಕ್ಷ್ಮೀನಗರ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಕರಾವಳಿ ಜಿಲ್ಲೆ ಮಾತ್ರವಲ್ಲದೆ ಶಿವಮೊಗ್ಗ, ಚಿಕ್ಕಮಗಳೂರು, ಕಾಸರಗೋಡು, ಕೊಪ್ಪಳ ಜಿಲ್ಲೆಗಳ ನೂರಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿ ದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ವಿನಯ ಹಾವಂಜೆ, ಶಂಕರ ದಾಸ್ ಚೇಂಡ್ಕಳ, ಜಯಲಕ್ಷ್ಮೀ ರಾಜೇಂದ್ರ ಉಡುಪಿ ಸಹಕರಿಸಿದ್ದರು.
ಕಲಾನಿಧಿ ಸಂಸ್ಥೆಯ ಅಧ್ಯಕ್ಷೆ ಉಪ್ಪೂರು ಭಾಗ್ಯಲಕ್ಷ್ಮೀ ಸ್ವಾಗತಿಸಿದರು. ದಿಶಾ ಕಮ್ಯೂನಿಕೇಷನ್ಸ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ರಾಗವಾಹಿನಿ ಸಂಸ್ಥೆಯ ಅಧ್ಯಕ್ಷ ರೋಹಿತ್ ಕುಮಾರ್ ಮಲ್ಪೆ ವಂದಿಸಿದರು.