×
Ad

ಅಲೆವೂರಿನಲ್ಲಿ ‘ಕೆಸರ್ಡ್‌ ಒಂಜಿ ದಿನ’ ಗ್ರಾಮೀಣ ಕ್ರೀಡಾಕೂಟ

Update: 2018-07-08 20:29 IST

ಉಡುಪಿ, ಜು.8: ಅಲೆವೂರು ಗುಡ್ಡೆಯಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಉಡುಪಿ ಯುವಜನ ಸೇವೆ, ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ 13ನೆ ವರ್ಷದ ಕೆಸರ್ಡ್‌ ಒಂಜಿ ದಿನ ಗ್ರಾಮೀಣ ಕ್ರೀಡಾಕೂಟವನ್ನು ರವಿವಾರ ಅಲೆವೂರು ಜೋಡು ರಸ್ತೆ ದೊಡ್ಡಮನೆ ಗದ್ದೆಯಲ್ಲಿ ಆಯೋಜಿಸಲಾಗಿತ್ತು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಯುವ ಜನತೆ ಇಂದು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಕೃಷಿಯತ್ತ ಸಳೆಯಲು ಗ್ರಾಮೀಣ ಕ್ರೀಡಾ ಕೂಟಗಳು ಸಹಕಾರಿಯಾಗಲಿದೆ. ಎಳೆಯ ವಯಸ್ಸಿನಲ್ಲಿ ಕೃಷಿಯ ಬಗ್ಗೆ ಒಲವು ಮೂಡಿಸುವ ಕಾರ್ಯ ಮಾಡಬೇಕು ಎಂದರು.

ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ ನಾಯಕ್ ಮಾತನಾಡಿ, ಯಾಂತ್ರಿಕ ಬದುಕಿನಿಂದ ಬೇಸತ್ತವರಿಗೆ ಈ ಕ್ರೀಡಾಕೂಟ ಹೊಸ ಹುರುಪು ನೀಡುತ್ತದೆ. ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಊರಿನ ಸಮಸ್ತರು ಒಂದಾಗಿ ಪರಸ್ಪರ ಸಾಮರಸ್ಯದಿಂದ ಆಚರಿಸುವ ಹಬ್ಬ ಇದಾಗಿದೆ ಎಂದರು.

ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್, ಪ್ರಗತಿಪರ ಕೃಷಿಕ ಅಲೆವೂರು ಶ್ರೀಧರ್ ಶೆಟ್ಟಿ, ಹರೀಶ್ ಶೆಟ್ಟಿ, ಪ್ರಕಾಶ್ ಅಂಚನ್, ಸಮಿತಿಯ ಅಧ್ಯಕ್ಷ ರಾಜೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಕೆಸರು ಗದ್ದೆಯಲ್ಲಿ ಕೆಸರು ಗದ್ದೆ ಓಟ, ಹಿಮ್ಮುಖ ಓಟ, ಹಗ್ಗಜಗ್ಗಾಟ ಸ್ಪರ್ಧೆ, ಗೋಣಿಚೀಲ ಓಟ, ಪಿರಮಿಡ್ ರಚಿಸಿ ಮಡಕೆ ಒಡೆಯುವ ಸ್ಪರ್ಧೆ, ಕಂಬಳ ಓಟ, ಗದ್ದೆಯಲ್ಲಿ ಈಜು ಸ್ಪರ್ಧೆ, ತಪ್ಪಂಗಾಯಿ, ಗಿರಿಗೀಟ್ ಓಟ, ನಿಧಿ ಹುಡುಕಾಟ ಸೇರಿದಂತೆ ವಿವಿಧ ಗ್ರಾಮೀಣ ಸ್ಪರ್ಧೆಗಳನ್ನು ಏರ್ಪಡಿಸ ಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News