ಮಾತೃ ಭಾಷೆ ಮೂಲಕವೇ ಇಂಗ್ಲಿಷ್ ಕಲಿಯುವುದು ಸರಿಯಾದ ವಿಧಾನ: ಜಿ.ರಾಜಶೇಖರ್
ಉಡುಪಿ, ಜು.8: ನಮ್ಮ ಜ್ಞಾನ ಸಂಪಾದನೆಯ ಒಂದೇ ಒಂದು ಮಾರ್ಗ ವೆಂದರೆ ಅದು ನಮ್ಮ ತಾಯಿ ನುಡಿಯಲ್ಲಿ ಎಲ್ಲ ವಿಷಯಗಳನ್ನು ಕಲಿಯುವುದು ಮತ್ತು ಗ್ರಹಿಸುವುದು. ಇಂಗ್ಲೀಷನ್ನು ಕೂಡ ನಾವು ನಮ್ಮ ಮಾತೃ ಭಾಷೆಯ ಮೂಲಕವೇ ಕಲಿಯಬೇಕು. ಇದುವೇ ಸರಿಯಾದ ಕಲಿಕೆಯ ವಿಧಾನ ಎಂಬುದು ಜಗತ್ತಿನಾದ್ಯಂತ ಶಿಕ್ಷಣ ತಜ್ಞರ ಅಭಿಪ್ರಾಯ ಎಂದು ಹಿರಿಯ ಚಿಂತಕ, ವಿಮರ್ಶಕ ಜಿ.ರಾಜಶೇಖರ ಹೇಳಿದ್ದಾರೆ.
ಅಂಬಲಪಾಡಿ ಡಾ.ಮುರಾರಿ ಬಲ್ಲಾಳ ಚಿಂತನ ಫೌಂಡೇಶನ್ ವತಿಯಿಂದ ಜು.3ರಂದು ಅಂಬಲಪಾಡಿಯಲ್ಲಿ ಆಯೋಜಿಸಲಾದ 25 ಮಂದಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಕಾರ್ಯ ಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕನ್ನಡ ಮಾಧ್ಯಮ ಕಲಿಕೆ ಕಡ್ಡಾಯಗೊಳಿಸುವುದರ ಬಗ್ಗೆ ಸರಕಾರ ಇಂದಿಗೂ ಹಿಂದೆ ಮುಂದೆ ಯೋಚಿಸುತ್ತಿದೆ. ಹುಸಿ ಘೋಷಣೆಗಳನ್ನು ಕೂಗಿ ಸಂಭ್ರಮಿಸು ವಲ್ಲಿಗೆ ಮಾತ್ರ ಸರಕಾರದ ಕನ್ನಡ ಪರ ಕಾಳಜಿ ಸೀಮಿತವಾಗಿದೆ. ಈ ವಿಚಾರ ದಲ್ಲಿ ಈವರೆಗೆ ಆಡಳಿತ ನಡೆಸಿದ ಎಲ್ಲ ಸರಕಾರಗಳು ಸೋತಿವೆ ಮತ್ತು ಇದರಲ್ಲಿ ಅಪ್ರಾಮಾಣಿಕವಾಗಿವೆ ಎಂದರು.
ಡಾ.ಮುರಾರಿ ಬಲ್ಲಾಳ್ ವರ್ಗ, ವರ್ಣ, ಜಾತಿ, ಲಿಂಗ ಹಾಗೂ ಕೋಮು ದ್ವೇಷದಂತಹ ನಾನಾ ತರಹದ ಸಾಮಾಜಿಕ ಅಸಮಾನತೆಗಳ ವಿರುಧ್ಧ ಹೋರಾಡುತ್ತ ಆದರ್ಶದ ಬಾಳನ್ನು ಬಾಳಿದರು. ಶಾಂತಿಯುತವಾದ, ಪ್ರಜಾ ಸತಾತಿತ್ಮಕವಾದ ಹಾಗೂ ಸಂವಿಧಾನತ್ಮಕವಾದ ಮಾರ್ಗಗಳನ್ನು ಬಿಟ್ಟು ಆಚೆ ಹೋಗಲಿಲ್ಲ. ಪ್ರಜಾಪ್ರಭುತ್ವದ ಮಿತಿಯ ಒಳಗಿನ ಎಲ್ಲಾ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಎಂದು ಅವರು ತಿಳಿಸಿದರು.
ಹಿರಿಯ ಚಿಂತಕ ಪ್ರೊ.ಫಣಿರಾಜ್ ಮಾತನಾಡಿ, ಉಡುಪಿ ಆಧುನಿಕವಾಗಿರ ಬೇಕಾಗಿರುವುದು ಯೋಚನೆಯಲ್ಲಿ, ಕಲಿಕೆಯಲ್ಲಿ ಮತ್ತು ಸಮಾನತೆಯಲ್ಲಿ ಹೊರತು ಹಳೆಯದನ್ನು ಕೆಡವಿ ಹೊಸದನ್ನು ಕಟ್ಟುವುದರಲ್ಲಿ ಅಲ್ಲ ಎಂಬ ದೃಢ ನಂಬಿಕೆಯ ಹೋರಾಟ ಮುರಾರಿಯವರದ್ದಾಗಿತ್ತು. ಈ ನೆಲೆಯಲ್ಲಿ ನೋಡಿ ದಾಗ ಮುರಾರಿಯ ಅಗಲಿಕೆ ಉಡುಪಿಗೆಆದ ಒಂದು ದೊಡ್ಡ ನಷ್ಟ ಎಂದರು.
ಈ ವರ್ಷದ ದೆಹಲಿಯ ಗಣರಾಜ್ಯೋತ್ಸವದ ಪೆರೇಡ್‌ನಲ್ಲಿ ಭಾಗವಹಿಸಿದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಿದ್ಯಾರ್ಥಿ ಸನತ್ ಕೋಟ್ಯಾನ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಆದಿಉಡುಪಿ ಶಾಲಾ ಸಂಚಾಲಕ ಟಿ.ಕೆ.ಗಣೇಶ್ ರಾವ್, ಪತ್ರಕರ್ತ ಗಣೇಶ್ ಕಲ್ಯಾಣಪುರ, ಪ್ರಹ್ಲಾದ್ ಬಲ್ಲಾಳ್, ಸುಪ್ರಸನ್ನ ನಕ್ಕತ್ತಾಯ, ಸವಿತಾ ಬಲ್ಲಾಳ್ ಉಪಸ್ಥಿತರಿದ್ದರು. ಮುರಾರಿ ಫೌಂಡೇಶನ್‌ನ ಟ್ರಸ್ಟಿ ಎನ್.ಸಂತೋಷ್ ಬಲ್ಲಾಳ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಗವತಿ ಭಟ್ ನುಡಿ ನಮನ ಸಲ್ಲಿಸಿದರು.