ಮಕ್ಕಳಲ್ಲಿ ಮಾದಕ ದ್ರವ್ಯ ವ್ಯಸನ ತಡೆಗೆ ಕೈಗೊಂಡ ಕ್ರಮಗಳನ್ನು ತಿಳಿಸಿ:ಕೇಂದ್ರಕ್ಕೆ ಸುಪ್ರೀಂ ಸೂಚನೆ

Update: 2018-07-08 15:20 GMT

 ಹೊಸದಿಲ್ಲಿ,ಜು.8: ಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆ ಪಿಡುಗು ಮತ್ತೊಮ್ಮೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಸ್ತಾಪಗೊಂಡಿದೆ. ತನ್ನ 2016ರ ತೀರ್ಪಿನ ಪಾಲನೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ತನಗೆ ತಿಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರಕ್ಕೆ ತಾಕೀತು ಮಾಡಿದ್ದು,ವಿಚಾರಣೆಯನ್ನು ಆ.20ಕ್ಕೆ ನಿಗದಿಗೊಳಿಸಿದೆ.

ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರ ಎನ್‌ಜಿಒ ಬಚ್ ಪನ್ ಬಚಾವೊ ಆಂದೋಲನ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಯನ್ನು 2016,ಡಿಸೆಂಬರ್‌ನಲ್ಲಿ ಇತ್ಯರ್ಥಗೊಳಿಸಿದ್ದ ಸಂದರ್ಭ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದ್ದ ಸರ್ವೋಚ್ಚ ನ್ಯಾಯಾಲಯವು, ಶಾಲಾಮಕ್ಕಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆ ಪ್ರಕರಣಗಳನ್ನು ತಡೆಗಟ್ಟಲು ಆರು ತಿಂಗಳೊಳಗೆ ರಾಷ್ಟ್ರೀಯ ಕ್ರಿಯಾ ಯೋಜನೆಯೊಂದನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡಿತ್ತು. ಅಲ್ಲದೆ,ಈ ಪಿಡುಗಿನ ಹಾವಳಿಯ ಗಂಭೀರತೆಯನ್ನು ತಿಳಿದುಕೊಳ್ಳಲು ಸಮೀಕ್ಷೆಯನ್ನು ನಡೆಸುವಂತೆಯೂ ಆದೇಶಿಸಿತ್ತು.

2016ರ ತೀರ್ಪನ್ನು ಪಾಲಿಸುವಲ್ಲಿ ಕೇಂದ್ರವು ವಿಫಲಗೊಂಡಿದೆ ಎಂದು ಎನ್‌ಜಿಒ ಪರ ಹಿರಿಯ ವಕೀಲ ಎಚ್.ಎಸ್.ಫೂಲ್ಕಾ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠಕ್ಕೆ ತಿಳಿಸಿದರು.

ಮಾದಕ ದ್ರವ್ಯ ಸೇವನೆಯ ಗಂಭೀರ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಮೂಡಿಸುವಂತೆ ತನ್ನ 2016ರ ಆದೇಶದಲ್ಲಿ ಕೇಂದ್ರ ಮತ್ತು ರಾಜ್ಯಗಳಿಗ ಸೂಚಿಸಿದ್ದ ನ್ಯಾಯಾಲಯವು,ಮಾದಕ ದ್ರವ್ಯಗಳ ಬಳಕೆಯಿಂದಾಗುವ ಹಾನಿಕಾರಕ ಪರಿಣಾಮಗಳ ಕುರಿತು ವಿಷಯವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸುವಂತೆ ಕೇಂದ್ರಕ್ಕೆ ನಿರ್ದೇಶ ನೀಡಿತ್ತು.

ರಾಜಧಾನಿ ದಿಲ್ಲಿಯೊಂದರಲ್ಲೇ ಸುಮಾರು ಒಂದು ಲಕ್ಷ ಬೀದಿಮಕ್ಕಳಿದ್ದು,ಅವರಲ್ಲಿ ಹೆಚ್ಚಿನವರು ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗಿದ್ದಾರೆ ಎಂದು ಪಿಐಎಲ್ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News