×
Ad

ತಮಿಳುನಾಡು: ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಕಾಯ್ದೆ ಅಂಗೀಕಾರ

Update: 2018-07-08 21:03 IST

ಚೆನ್ನೈ, ಜು. 8: ವಿದ್ಯಾರ್ಥಿಗಳಿಗೆ ಸುರಕ್ಷೆ ಹಾಗೂ ಭದ್ರತೆ, ಲೈಂಗಿಕ ಕಿರುಕುಳದಿಂದ ರಕ್ಷಣೆ, ಶೈಕ್ಷಣಿಕವಾಗಿ ಹಿಂದುಳಿದಿರುವ ಮಕ್ಕಳ ಹಕ್ಕುಗಳ ರಕ್ಷಣೆ ತಮಿಳುನಾಡು ವಿಧಾನ ಸಭೆಯಲ್ಲಿ ಮಂಜೂರಾದ ನೂತನ ಮಸೂದೆಯ ಮುಖ್ಯ ಲಕ್ಷಣಗಳು. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವ ಗುರಿ ಹೊಂದಿರುವ ಈ ಮಸೂದೆಯನ್ನು ಪೋಷಕರು ಹಾಗೂ ಶಿಕ್ಷಣ ತಜ್ಞರು ಸ್ವಾಗತಿಸಿದ್ದಾರೆ.

ಮಸೂದೆಯ ಕಡ್ಡಾಯ ಸೂಚನೆಗಳನ್ನು ಉದ್ದೇಶಪೂರ್ವಕವಾಗಿ ಅನುಸರಿಸದೇ ಇದ್ದಲ್ಲಿ, 1 ವರ್ಷ ಜೈಲು ಶಿಕ್ಷೆ ಅಥವಾ 5 ಲಕ್ಷದ ರೂ. ವರೆಗೆ ದಂಡ ಅಥವಾ ಎರಡೂ ಶಿಕ್ಷೆಯನ್ನು ವಿಧಿಸಬಹುದಾಗಿದೆ. ವಿಧಾನ ಸಭೆಯಲ್ಲಿ ಜುಲೈ 5ರಂದು ತಮಿಳುನಾಡು ಖಾಸಗಿ ಶಾಲೆ (ನಿಯಂತ್ರಣ) ಮಸೂದೆ-2018 ಅನ್ನು ಅಂಗೀಕರಿಸಲಾಯಿತು. ಗುಣಮಟ್ಟದ ಶಿಕ್ಷಣದ ಭರವಸೆ, ನ್ಯಾಯಯುತ ಶುಲ್ಕ ಸಂಗ್ರಹ, ಸೂಕ್ತ ರೀತಿಯಲ್ಲಿ ಪರೀಕ್ಷೆಗಳ ಆಯೋಜನೆ ಸೇರಿದಂತೆ ಹಲವು ಅಂಶಗಳ ಖಾತರಿ ನೀಡುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿ ಯಾವುದೇ ಬೋರ್ಡ್ ಪರೀಕ್ಷೆಗೆ ಹಾಜರಾಗುವುದನ್ನು ಖಾಸಗಿ ಶಾಲೆ ತಡೆಯುವಂತಿಲ್ಲ ಎಂದು ಕಾಯ್ದೆಯ ಕಲಂ 22 (3) ಹೇಳಿದೆ. ಈ ಕಾಯ್ದೆ ಅನುಸರಿಸದೇ ಇದ್ದಲ್ಲಿ 5 ಲಕ್ಷ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶ ಇದೆ. ರಾಜ್ಯದಲ್ಲಿ ಕೆಲವು ಶಾಲೆಗಳು ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಕಾಯ್ದೆ ಪ್ರಾಮುಖ್ಯತೆ ಹೊಂದಿದೆ ಎಂದು ವಿದ್ಯಾರ್ಥಿಯೊಬ್ಬನ ಪೋಷಕ ಪಿ. ರವಿಕುಮಾರ್ ಹೇಳಿದ್ದಾರೆ.

ಈ ಕಾಯ್ದೆಯ ಕಲಂ 20 (1) ಹಾಗೂ (2)ರಂತೆ ಮಾನಸಿಕ ಕಿರುಕುಳ ಅಥವಾ ದೈಹಿಕ ಕಿರುಕುಳ ಅಥವಾ ಲೈಂಗಿಕ ಕಿರುಕುಳದಿಂದ ರಕ್ಷಣೆ ಸೇರಿದಂತೆ ವಿದ್ಯಾರ್ಥಿಗಳಿಗೆ ಸುರಕ್ಷೆ ಹಾಗೂ ಭದ್ರತೆಯ ಭರವಸೆಯನ್ನು ಕಡ್ಡಾಯವಾಗಿ ಎಲ್ಲ ಶಾಲೆಗಳು ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News