ಟರ್ಕಿಯಲ್ಲಿ ನೂತನ ಆದೇಶ: ಸೈನಿಕರು, ಪೊಲೀಸರು ಸೇರಿ 18,500 ಉದ್ಯೋಗಿಗಳ ಉಚ್ಛಾಟನೆ

Update: 2018-07-08 15:50 GMT

ಅಂಕಾರಾ, ಜು.8: ಟರ್ಕಿ ಸರಕಾರವು ರವಿವಾರದಂದು ನೂತನ ಆದೇಶದನ್ವಯ ಸೈನಿಕರು, ಪೊಲೀಸರು ಸೇರಿದಂತೆ 18,500ಕ್ಕೂ ಅಧಿಕ ಉದ್ಯೋಗಿಗಳನ್ನು ಹುದ್ದೆಯಿಂದ ವಜಾಗೊಳಿಸಿದೆ. ಸರಕಾರ ಹೊರಡಿಸಿರುವ ಈ ತುರ್ತು ಆದೇಶದಲ್ಲಿ ರಾಷ್ಟ್ರೀಯ ಭದ್ರತೆಯ ವಿರುದ್ಧ ಕಾರ್ಯಾಚರಿಸುವ ಉಗ್ರ ಸಂಘಟನೆಗಳು ಮತ್ತು ಗುಂಪುಗಳ ಜೊತೆ ಸಂಪರ್ಕ ಹೊಂದಿರುವ ಅನುಮಾನದಲ್ಲಿ 18,632 ಜನರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಅಧಿಕೃತ ಗೆಜೆಟ್ ತಿಳಿಸಿದೆ.

ವಜಾಗೊಂಡವರ ಪೈಕಿ 8,998 ಪೊಲೀಸ್ ಅಧಿಕಾರಿಗಳು, 3,077 ಸೈನಿಕರು, 1,949 ವಾಯುಪಡೆ ಸಿಬ್ಬಂದಿ ಹಾಗೂ 1,126 ನೌಕಾಪಡೆಯ ಸಿಬ್ಬಂದಿ ಸೇರಿದ್ದಾರೆ. ಕಾನೂನು ಸಚಿವಾಲಯದ ಹಾಗೂ ಸಂಬಂಧಿತ ಸಂಸ್ಥೆಗಳ 1,052 ಪೌರ ಸೇವಕರು, ತಟರಕ್ಷಣಾ ಪಡೆಯ 192 ಹಾಗೂ ಪೊಲೀಸ್ ಅಪರಾಧ ಪಡೆಯ ಉನ್ನತ ವಿಭಾಗದ 649 ಸಿಬ್ಬಂದಿಯನ್ನೂ ಈ ಆದೇಶದನ್ವಯ ವಜಾಗೊಳಿಸಲಾಗಿದೆ. ಜೊತೆಗೆ 199 ಶಿಕ್ಷಣ ತಜ್ಞರನ್ನು ವಜಾಗೊಳಿಸಲಾಗಿದೆ.

2016ರ ಜುಲೈಯಲ್ಲಿ ಅಧ್ಯಕ್ಷ ರಿಸೆಪ್ ತಯ್ಯಿಬ್ ಎರ್ದೊಗಾನ್ ಅವರನ್ನು ಪದಚ್ಯುತಿಗೊಳಿಸುವ ಪ್ರಯತ್ನದ ನಂತರ ಟರ್ಕಿಯಲ್ಲಿ ತುರ್ತುಸ್ಥಿತಿಯನ್ನು ಘೋಷಿಸಲಾಗಿದೆ. ಮಾಧ್ಯಮಗಳು ಈ ನೂತನ ಆದೇಶವನ್ನು ಅಂತಿಮ ಎಂದು ಘೋಷಿಸಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿ ಶೀಘ್ರದಲ್ಲೇ ಕೊನೆಯಾಗಬಹುದು ಎಂದು ಅಭಿಪ್ರಾಯಪಟ್ಟಿವೆ. ಜುಲೈ 2016ರಿಂದೀಚೆಗೆ ಹೊರಡಿಸಲಾಗಿರುವ ತುರ್ತು ಆದೇಶಗಳಲ್ಲಿ ಈವರೆಗೆ 1,10,000 ಸರಕಾರಿ ಉದ್ಯೋಗಿಗಳನ್ನು ವಜಾ ಮಾಡಲಾಗಿದೆ ಹಾಗೂ ಸಾವಿರಾರು ಉದ್ಯೋಗಿಗಳನ್ನು ಅಮಾನತುಗೊಳಿಸಲಾಗಿದೆ. ಟರ್ಕಿಯ ಈ ಕ್ರಮವನ್ನು ಇತರ ಪಶ್ಚಿಮಾತ್ಯ ಮಿತ್ರ ರಾಷ್ಟ್ರಗಳು ಟೀಕಿಸಿವೆ.

ಅಧ್ಯಕ್ಷರ ವಿರುದ್ಧದ ಕಾರ್ಯಾಚರಣೆಯ ಹಿಂದೆ ಯುಎಸ್ ಮೂಲದ ಮುಸ್ಲಿಂ ಪ್ರವರ್ತಕ ಫೆತುಲ್ಲಾಹ್ ಗುಲೆನ್ ಕೈವಾಡವಿದೆ ಎಂದು ಟರ್ಕಿ ಆರೋಪಿಸಿದೆ. ತುರ್ತುಸ್ಥಿತಿಯ ಆದೇಶಗಳಲ್ಲಿ ವಜಾಗೊಳಿಸಲಾಗಿರುವ ಜನರ ಪೈಕಿ ಬಹುತೇಕರು ಗುಲೆನ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಟರ್ಕಿ ಅನುಮಾನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News