ತಾಯಿ ಭೇಟಿಗಾಗಿ ಬಿಗಿ ಭದ್ರತೆಯಲ್ಲಿ ಬನ್ನಂಜೆ ರಾಜ ಉಡುಪಿಗೆ
ಉಡುಪಿ, ಜು.8: ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅನುಮತಿಯಂತೆ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ಬೆಳಗಾವಿಯ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜನನ್ನು ಪೊಲೀಸರು ಇಂದು ಬಿಗಿ ಭದ್ರತ್ರೆಯಲ್ಲಿ ಉಡುಪಿಗೆ ಕರೆ ತಂದಿದ್ದಾರೆ.
ಸದ್ಯಕ್ಕೆ ಉಡುಪಿ ನಗರ ಪೊಲೀಸ್ ಠಾಣೆಯ ಲಾಕಪ್‌ನಲ್ಲಿ ಉಳಿದುಕೊಂಡಿರುವ ಬನ್ನಂಜೆ ರಾಜನಿಗೆ ಸೋಮವಾರ ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯವರೆಗೆ ಮಲ್ಪೆ ಸಮೀಪದ ಕಲ್ಮಾಡಿಯಲ್ಲಿರುವ ತನ್ನ ಮನೆಯಲ್ಲಿ ತಾಯಿಯೊಂದಿಗೆ ಇರಲು ಪೊಲೀಸರು ಅವಕಾಶ ಕಲ್ಪಿಸಲಿದ್ದಾರೆ.
ನ್ಯಾಯಾಲಯ ಅನುಮತಿ: ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಲ್ಲಿ ಪ್ರಕರಣದ ವಿಚಾರಣೆಯ ಸಂದರ್ಭ ಬೆಳಗಾವಿಯ ಹಿಂಡಲಗಾ ಜೈಲಿ ನಲ್ಲಿದ್ದ ಬನ್ನಂಜೆ ರಾಜ ವೀಡಿಯೊ ಕಾನ್ಫೆರೆನ್ಸ್ ಮೂಲಕ ಅನಾರೋಗ್ಯ ಪೀಡಿತ ತಾಯಿಯನ್ನು ನೋಡಲು ಅನುವು ಮಾಡಿಕೊಡಬೇಕೆಂದು ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಅವರಲ್ಲಿ ಮನವಿ ಮಾಡಿದರು. ಅದರಂತೆ ಬನ್ನಂಜೆ ರಾಜ ಪರ ವಕೀಲ ಉಡುಪಿಯ ಶಾಂತಾರಾಮ್ ಶೆಟ್ಟಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಬೆಳಗ್ಗೆ 6ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ತಾಯಿಯೊಂದಿಗೆ ಇರಲು ಬನ್ನಂಜೆ ರಾಜನಿಗೆ ಅನುಮತಿ ನೀಡಿ ನ್ಯಾಯಾಧೀಶರು ಜು.5ರಂದು ಆದೇಶ ನೀಡಿದರು. ಇದಕ್ಕಾಗಿ ಸಾರಿಗೆ ಹಾಗೂ ಭದ್ರತೆಗೆ ತಗಲುವ ವೆಚ್ಚವನ್ನು ಬನ್ನಂಜೆ ರಾಜನೇ ಪೊಲೀಸ್ ಇಲಾಖೆಗೆ ಭರಿಸಬೇಕು ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಸೂಚಿಸಿತು.
ಅದರಂತೆ ಜು.7ರಂದು ಬೆಳಗಾವಿಗೆ ತೆರಳಿರುವ ಉಡುಪಿ ನಗರ ಠಾಣಾಧಿಕಾರಿ ಸುನೀಲ್ ಕುಮಾರ್ ನೇತೃತ್ವದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತಂಡ ಇಂದು ಬೆಳಗ್ಗೆ ಬನ್ನಂಜೆ ರಾಜನನ್ನು ಬಿಗಿ ಭದ್ರತೆಯಲ್ಲಿ ಮಾರ್ಗ ಮೂಲಕ ಕರೆತಂದಿತು. ಈ ಮಧ್ಯೆ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಬನ್ನಂಜೆ ರಾಜ ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಸಂಜೆ 6.45ರ ಸುಮಾರಿಗೆ ಉಡುಪಿ ನಗರ ಠಾಣೆಗೆ ಕರೆ ತರಲಾಯಿತು.
ಠಾಣೆಯ ಸುತ್ತ ಕಣ್ಗಾವಲು: ಬನ್ನಂಜೆ ರಾಜ ಉಳಿದುಕೊಂಡಿರುವ ಉಡುಪಿ ನಗರ ಪೊಲೀಸ್ ಠಾಣೆಯ ಸುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದ್ದು, ಶಸ್ತ್ರ ಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ.
ಬನ್ನಂಜೆ ರಾಜ ಠಾಣೆಗೆ ಆಗಮಿಸುವ ಮೊದಲೇ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಠಾಣೆಯ ಆವರಣ, ಗೇಟಿನ ಎದುರು ಹಾಗೂ ಮಹಡಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆತನನ್ನು ಠಾಣೆಯೊಳಗೆ ಕರೆದುಕೊಂಡ ಹೋದ ಬಳಿಕ ಇಡೀ ಗೇಟನ್ನು ಬ್ಯಾರಿ ಗೇಡ್ ಮೂಲಕ ಮುಚ್ಚಿ ಯಾರೂ ಕೂಡ ಒಳಪ್ರೇಶದಂತೆ ನಿರ್ಬಂಧ ಹೇರಲಾಯಿತು.
ಬನ್ನಂಜೆ ರಾಜ ಜು.8ರ ಸಂಜೆಯಿಂದ ಜು.9ರ ಬೆಳಗ್ಗೆಯವರೆಗೆ ಹಾಗೂ ಜು.9ರ ಸಂಜೆಯಿಂದ ಜು.10ರ ಬೆಳಗ್ಗೆವರೆಗೆ ಉಳಿದುಕೊಳ್ಳುವ ನಗರ ಪೊಲೀಸ್ ಠಾಣೆಯಲ್ಲಿ ಮೂರು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಕಣ್ಗಾವಲು ಇರಿಸಲಾಗಿದೆ. ಇಂದು ಸಂಜೆಯ ವೇಳೆ ಠಾಣೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕುಂದಾಪುರ ಡಿವೈಎಸ್ಪಿ ದಿನೇಶ್ ನಾಯಕ್ ಹಾಜರಿದ್ದರು.
ಕಲ್ಮಾಡಿಯ ಮನೆಗೂ ಭದ್ರತೆ
ನಗರ ಠಾಣೆಯ ಲಾಕಪ್‌ನಲ್ಲಿರುವ ಬನ್ನಂಜೆ ರಾಜನನ್ನು ಸೋಮವಾರ ಬೆಳಗ್ಗೆ 7.30ರ ಸುಮಾರಿಗೆ ಪೊಲೀಸರು ಬಿಗಿ ಭದ್ರತೆಯಲ್ಲಿ ಆತನ ಮನೆಯಾದ ಕಲ್ಮಾಡಿಗೆ ಕರೆದೊಯ್ಯಲಿರುವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈಗಾಗಲೇ ಮನೆಯನ್ನು ಸಂಪೂರ್ಣ ಶೋಧ ಹಾಗೂ ಪರಿಶೀಲನೆ ನಡೆಸಿ ರುವ ಪೊಲೀಸರು ಮನೆಯ ಸುತ್ತ ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಬನ್ನಂಜೆ ರಾಜನಿಗೆ ನಾಳೆ ಬೆಳಗ್ಗೆಯಿಂದ ಸಂಜೆಯವರೆಗೆ ತಾಯಿಯೊಂದಿಗೆ ಮಾತ್ರ ಇರಲು ಅನುಮತಿ ನೀಡಲಾಗಿದ್ದು, ಉಳಿದಂತೆ ಯಾರಿಗೂ ಮನೆ ಒಳಗೆ ಪ್ರವೇಶ ಇಲ್ಲ ಎನ್ನಲಾಗಿದೆ.
ಬನ್ನಂಜೆ ರಾಜನನ್ನು ಸಂಜೆ ಮತ್ತೆ ಠಾಣೆಗೆ ಕರೆ ತರಲಿರುವ ಪೊಲೀಸರು ಲಾಕಪ್‌ನಲ್ಲಿ ಇರಿಸಿಕೊಂಡು ಜು.10ರಂದು ಬೆಳಗ್ಗೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯ ಕೀಯ ಪರೀಕ್ಷೆಗೆ ಒಳಪಡಿಸಿ ಬೆಳಗಾವಿ ಜೈಲಿಗೆ ಕರೆದೊಯ್ಯಲಿದ್ದಾರೆ.