‘ಕದ್ರಿ-ಕೇಂದ್ರ’ ವಲಯ ಕಚೇರಿ ಸ್ಥಾಪನೆಗಿಲ್ಲ ಭಾಗ್ಯ!
ಮಂಗಳೂರು, ಜು.8: ಆಡಳಿತದ ಕೇಂದ್ರೀಕರಣ ತಪ್ಪಿಸುವ ಸಲುವಾಗಿ ಮಂಗಳೂರು ಮಹಾನಗರ ಪಾಲಿಕೆಯನ್ನು 3 ವಲಯಗಳನ್ನಾಗಿ ವಿಂಗಡಿಸಿ ‘ವಲಯ ಕಚೇರಿ’ಗಳನ್ನು ತೆರೆಯುವ ಮಹತ್ವದ ಯೋಜನೆ ನನೆಗುದಿಗೆ ಬಿದ್ದಿದೆ. ಹಾಗಾಗಿ ಕದ್ರಿ ಮತ್ತು ಕೇಂದ್ರ ವಲಯ ಕಚೇರಿ ಸ್ಥಾಪನೆಯ ಭಾಗ್ಯ ಸದ್ಯಕ್ಕಿಲ್ಲ.
ಮನಪಾ ವ್ಯಾಪ್ತಿಯಲ್ಲಿ ಇದೀಗ ಸುರತ್ಕಲ್ ವಲಯ ಕಚೇರಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಲು ಮತ್ತು ಜನರ ಅಲೆದಾಟ ತಪ್ಪಿಸಲು ಮನಪಾವನ್ನು 3 ವಲಯಗಳನ್ನಾಗಿ ವಿಂಗಡಿಸಲು ಈ ಹಿಂದೆ ನಿರ್ಧರಿಸಲಾಗಿತ್ತು. ಅಂದರೆ ಸುರತ್ಕಲ್ ಅಲ್ಲದೆ, ಮಂಗಳೂರು ಕೇಂದ್ರ ವಲಯ ಕಚೇರಿ ಹಾಗೂ ಕದ್ರಿ ವಲಯ ಕಚೇರಿ ತೆರೆಯುವ ಪ್ರಸ್ತಾಪವಿತ್ತು.
ನಗರದ ಲಾಲ್‌ಬಾಗ್‌ನಲ್ಲಿರುವ ಮನಪಾ ಕಚೇರಿಯು ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ನಗರ ಹೊರವಲಯದ ಜನರು ಸಣ್ಣಪುಟ್ಟ ಕೆಲಸವಿದ್ದರೂ ಮನಪಾ ಕಚೇರಿಗೆ ಅಲೆದಾಡಬೇಕಾಗಿತ್ತು. ಅದನ್ನು ತಪ್ಪಿಸುವ ಸಲುವಾಗಿ ಆಡಳಿತವನ್ನು ಮೂರು ವಲಯಗಳ ಮೂಲಕ ಹಂಚಿಕೊಂಡು ಆಯಾಯ ಭಾಗದ ಸಾರ್ವಜನಿಕರಿಗೆ ಆಯಾ ವ್ಯಾಪ್ತಿಯಲ್ಲಿಯೇ ಪಾಲಿಕೆ ಕೆಲಸಗಳನ್ನು ನಡೆಸುವ ಬಗ್ಗೆ ಯೋಜನೆ ರೂಪಿಸಲಾಗಿತ್ತು. ಆ ಮೂಲಕ ನಗರ ಹೊರವಲಯದ ಸಾರ್ವಜನಿಕರು ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಮಂಗಳೂರು ಪಾಲಿಕೆಗೆ ಬರುವುದನ್ನು ತಪ್ಪಿಸಿ ನಗರದೊಳಗಿನ ಸಂಚಾರ ದಟ್ಟಣೆಯನ್ನೂ ಕಡಿಮೆಗೊಳಿಸುವ ಗುರಿ ಹೊಂದಲಾಗಿತ್ತು.
ಸುರತ್ಕಲ್‌ನಲ್ಲಿ ಉಪ ಕಚೇರಿಯಿದ್ದು, ಅದನ್ನು ಮೇಲ್ದರ್ಜೆಗೆ ಏರಿಸುವುದರೊಂದಿಗೆ ಹರಿನಾಥ್ ಮೇಯರ್ ಆಗಿದ್ದಾಗ ಮಂಗಳೂರು ಕೇಂದ್ರ ಕಚೇರಿ ವಲಯ ಹಾಗೂ ಕದ್ರಿ ವಲಯ ಕಚೇರಿಯಾಗಿ ವಿಂಗಡಿಸುವ ಸಿದ್ಧತೆ ನಡೆದಿತ್ತು. ಈ ಬಗ್ಗೆ ಎಲ್ಲಾ ಪ್ರಕ್ರಿಯೆ ನಡೆಸಿದ್ದ ಪಾಲಿಕೆಯು ವಲಯವಾರು ವಾರ್ಡ್‌ಗಳ ಹಂಚಿಕೆಯನ್ನೂ ಕೂಡ ಮಾಡಿತ್ತು. ಹರಿನಾಥ್‌ರ ಮೇಯರ್ ಅವಧಿ ಮುಗಿಯುತ್ತಲೇ ವಲಯ ಸ್ಥಾಪನೆಗೆ ಹಿನ್ನಡೆಯಾಗಿದೆ.
ಸುರತ್ಕಲ್‌ನ ಉಪ ಕಚೇರಿ ಮೇಲ್ದರ್ಜೆಗೇರಿದ್ದು, ವಲಯ 1 ಕಚೇರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಅದರೊಂದಿಗೆ ವಲಯ-2 ಹಾಗೂ ವಲಯ-3 ಕಚೇರಿಗಳು ಲಾಲ್‌ಬಾಗ್‌ನಲ್ಲಿರುವ ಮನಪಾ ಕಟ್ಟಡದಲ್ಲೇ ಕಾರ್ಯಾಚರಿಸಲು ರೂಪುರೇಷ ನಡೆಸಲಾಗಿತ್ತು. ಪ್ರತೀ ವಲಯ ಕಚೇರಿಗೆ ಉಪ ಆಯುಕ್ತರ ನೇಮಕವಲ್ಲದೆ ಇತರ ಇಲಾಖೆಗೆ ಅಧಿಕಾರಿಗಳ ನೇಮಕವೂ ಆಗಬೇಕಾಗಿತ್ತು. ಈಗಾಗಲೆ ಸಿಬ್ಬಂದಿ ಕೊರತೆ ಎದುರಿಸುವ ಮನಪಾವು ವಲಯ ಕಚೇರಿ ಸ್ಥಾಪಿಸಿ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳದೆ ಯೋಜನೆಯನ್ನೇ ಕೈ ಚೆಲ್ಲಿದೆ.
ವಲಯ ಕಚೇರಿಗಳಿಗೆ ಪಾಲಿಕೆಯು ಕೆಲವು ಅಧಿಕಾರವನ್ನೂ ಹಂಚಿಕೆ ಮಾಡಿಕೊಂಡಿತ್ತು. ಅಂದರೆ ನಗರ ಯೋಜನೆಯಡಿ 500 ಚದರ ಮೀಟರ್‌ವರೆಗಿನ ವಾಸ, ವಾಣಿಜ್ಯ ಕಟ್ಟಡಗಳಿಗೆ ಕಟ್ಟಡ ನಿರ್ಮಾಣ ಪರವಾನಿಗೆ ನೀಡುವುದು, ಕಟ್ಟಡ ಪೂರ್ಣಗೊಂಡ ಬಗ್ಗೆ ಪ್ರಮಾಣ ಪತ್ರ ನೀಡುವುದು, ಪ್ರವೇಶ ಪತ್ರ ಹಾಗೂ ಪರವಾನಿಗೆ ನವೀಕರಣ ನೀಡುವ ಅಧಿಕಾರವನ್ನು ನೀಡಲಾಗಿತ್ತು.
ಕಂದಾಯ ಶಾಖೆ ವ್ಯಾಪ್ತಿಯಡಿ ಅಸ್ತಿ ಮೌಲ್ಯ 1 ಕೋ.ರೂ.ವರೆಗಿನ ಖಾತಾ ನೋಂದಣಿ, ವರ್ಗಾವಣೆ /ವಾಸ, ವಾಣಿಜ್ಯ ಆಸ್ತಿಗಳ ಕರಪಾವತಿ ಹೊಣೆಗಾರಿಕೆ, ವಿಭಾಗ ಖಾತೆ, ವಾಸ ಸ್ಥಳ ದೃಢೀಕರಣ ಪತ್ರ, ನಮೂನೆ-9 ಖಾತಾ ದೃಢೀಕರಣ, ಖಾತಾ ಎಕ್ಸ್‌ಟ್ರಾಕ್ ನೀಡುವುದು, 2500 ಚದರ ಅಡಿವರೆಗೆ ಕಟ್ಟಡ ನಂಬ್ರ ನೀಡುವ ಅಧಿಕಾರವನ್ನು ನೀಡಲಾಗಿತ್ತು.
ಆರೋಗ್ಯ ಶಾಖೆಯಡಿ 200 ಚದರ ಅಡಿವರೆಗಿನ ಜನರಲ್ ಲೈಸೆನ್ಸ್, ಆರೋಗ್ಯ, ವಾಣಿಜ್ಯ, ಉದ್ದಿಮೆ, ಕೈಗಾರಿಕೆಗಳಿಗೆ ಉದ್ದಿಮೆ ಪರವಾನಿಗೆ ನೀಡುವುದು ಹಾಗೂ ನವೀಕರಿಸುವ ಜವಾಬ್ಧಾರಿ ನೀಡಲಾಗಿತ್ತು. ಆದರೆ, ವಲಯ ಕಚೇರಿ ತೆರೆಯುವ ಯೋಜನೆಯೇ ನನೆಗುದಿಗೆ ಬಿದ್ದ ಕಾರಣ ಅಧಿಕಾರ ಹಂಚಿಕೆಯೂ ಮರೀಚಿಕೆಯಾಗಿದೆ.
ಅಧಿಕಾರಿ ಸಿಬ್ಬಂದಿ ವರ್ಗದ ಕೊರತೆ
ವಲಯ ಕಚೇರಿಗಳ ಮೂಲಕ ಆಡಳಿತ ವಿಕೇಂದ್ರೀಕರಣಗೊಳಿಸುವ ಯೋಜನೆಯನ್ನು ಕೈ ಬಿಟ್ಟಿಲ್ಲ. ನಮಗೆ ಈಗ ಎದುರಾಗಿರುವುದು ಅಧಿಕಾರಿ- ಸಿಬ್ಬಂದಿ ವರ್ಗದ ಕೊರತೆಯಾಗಿದೆ. 1725 ಅಧಿಕಾರಿ-ಸಿಬ್ಬಂದಿ ವರ್ಗದ ಪೈಕಿ ನಮ್ಮಲ್ಲಿರುವುದು ಈಗ ಕೇವಲ 600 ಮಾತ್ರ. ಅಧಿಕಾರಿಗಳಿಗಂತೂ ಮೂರ್ನಾಲ್ಕು ಇಲಾಖೆಗಳ ಪ್ರಭಾರ ವಹಿಸಲಾಗಿದೆ. ಒತ್ತಡದಿಂದ ಅವರು ಕಾರ್ಯನಿರ್ವಹಿಸಲಾಗದ ಸ್ಥಿತಿಯಲ್ಲಿದ್ದಾರೆ. ಕಳೆದ 2 ತಿಂಗಳಲ್ಲಿ ಸುಮಾರು 10 ಅಧಿಕಾರಿಗಳು ನಿವೃತ್ತರಾಗಿದ್ದಾರೆ. ಸರಕಾರ ಸಕಾಲಕ್ಕೆ ಅಧಿಕಾರಿ-ಸಿಬ್ಬಂದಿ ವರ್ಗವನ್ನು ನೇಮಕ ಮಾಡಿದರೆ ಜನರ ಅರ್ಜಿಗಳನ್ನು ನಿಗದಿತ ಸಮಯಕ್ಕೆ ವಿಲೇವಾರಿ ಮಾಡಲು ಸಾಧ್ಯವಿದೆ. ವಲಯಗಳಾಗಿ ವಿಂಗಡನೆಗೊಂಡರೆ ಅನುದಾನ ಕೂಡಾ ಹೆಚ್ಚಿಗೆ ಬರಲಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿದಿದೆ.
- ಮುಹಮ್ಮದ್ ಕುಂಜತ್ತಬೈಲ್,
ಉಪ ಮೇಯರ್, ಮಂಗಳೂರು ಮಹಾನಗರ ಪಾಲಿಕೆ