×
Ad

ಸಮ್ಮಿಶ್ರ ಸರಕಾರ ಶೀಘ್ರ ಪತನ : ಡಿ.ವಿ. ಸದಾನಂದ ಗೌಡ

Update: 2018-07-08 22:13 IST

ಮಂಗಳೂರು, ಜು.8: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದ ತಿಂಗಳೊಳಗೆ ಅಧಿಕಾರಕ್ಕಾಗಿ ಕಚ್ಚಾಟ ಆರಂಭಿಸಿದೆ. ಹಾಗಾಗಿ ಈ ಸಮ್ಮಿಶ್ರ ಸರಕಾರ ಹೆಚ್ಚು ದಿನವೇನೋ ಬಾಳದು. ಯಾವುದೇ ಕ್ಷಣದಲ್ಲಿ ಪತನ ಆಗಬಹುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ರವಿವಾರ ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಆಡಳಿತಯಂತ್ರ ಸಂಪೂರ್ಣ ಕುಸಿದಿದೆ. ಯಾವುದೇ ಜನಪರ ಕೆಲಸಗಳು ಆಗುತ್ತಿಲ್ಲ. ಸಮಿಶ್ರ ಸರಕಾರ ಯಾವಾಗ ಪಲ್ಲಟ ಆಗುತ್ತದೆ ಎಂದು ಜನರು ಕಾಯುತ್ತಿದ್ದಾರೆ ಎಂದರು.

ಸಮ್ಮಿಶ್ರ ಸರಕಾರದಿಂದ ಹೆಚ್ಚಿನ ಅಭಿವೃದ್ಧಿ ಕಾರ್ಯ ನಿರೀಕ್ಷಿಸಲು ಸಾಧ್ಯವಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕು ಎಂಬ ಏಕೈಕ ಕಾರಣಕ್ಕೆ ಆಡಳಿತ ನಡೆಸುತ್ತಿದ್ದಾರೆ. ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸದಾನಂದ ಗೌಡ ನುಡಿದರು.

ರಾಜ್ಯದಲ್ಲಿ ಅದರಲ್ಲೂ ಕರಾವಳಿ ತೀರದಲ್ಲಿ ಭಾರೀ ಮಳೆಯಾಗುತ್ತಿದೆ. ಸಾಕಷ್ಟು ಸಾವು-ನೋವು, ಹಾನಿ ಸಂಭವಿಸಿದೆ. ಪರಿಹಾರ ಕಾರ್ಯ ಕೂಡಾ ಚುರುಕಾಗಿಲ್ಲ. ಮುಂಜಾಗರೂಕತಾ ಕ್ರಮವಾಗಿ ಯಾವುದೇ ಸಭೆಯನ್ನೂ ನಡೆಸಲಾಗಿಲ್ಲ. ಜನತೆ ಮಳೆಯಿಂದ ತತ್ತರಿಸುತ್ತಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಜನಪ್ರತಿನಿಧಿಗಳು ಸರಕಾರ ಉಳಿಸಲು ಹರಸಾಹಸ ಪಡುವುದರಲ್ಲೇ ಮಗ್ನರಾಗಿದ್ದು, ಜನರ ನೋವಿಗೆ ಸ್ಪಂದಿಸುತ್ತಿ ಎಂದು ಸದಾನಂದ ಗೌಡ ಕಿಡಿಕಾರಿದರು.

ಹರಿದ ಬಟ್ಟೆಯ ಹಾಗೆ: ದೇಶದಲ್ಲಿ ತೃತೀಯ ರಂಗವು ಹರಿದ ಬಟ್ಟೆಯ ಹಾಗೆ ಆಗಿದೆ. ಒಬ್ಬರನ್ನು ನೋಡಿದರೆ ಇನ್ನೊಬ್ಬರಿಗೆ ಆಗುವುದಿಲ್ಲ. ಮಾಯಾವತಿ ಕಾಂಗ್ರೆಸ್ ಜೊತೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಯಾರು ಏನೇ ಕಸರತ್ತು ಮಾಡಿದರೂ ಮೋದಿಯನ್ನು ಮಣಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸದಾನಂದ ಗೌಡ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News