ದೇಶದ ಎಲ್ಲಾ ಜಿಲ್ಲೆಗಳಲ್ಲಿ ಶರಿಯಾ ಕೋರ್ಟ್ ಆರಂಭಕ್ಕೆ ಎಐಎಂಪಿಎಲ್‌ಬಿ ಚಿಂತನೆ
ಲಕ್ನೊ, ಜು.8: ವಿವಾದಗಳನ್ನು ಇಸ್ಲಾಮಿಕ್ ಕಾನೂನಿನ ಪ್ರಕಾರ ಬಗೆಹರಿಸುವ ನಿಟ್ಟಿನಲ್ಲಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಶರಿಯಾ ಕೋರ್ಟ್‌ಗಳನ್ನು ಆರಂಭಿಸುವ ಬಗ್ಗೆ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಚಿಂತನೆ ನಡೆಸಿದೆ.
ಜುಲೈ 15ರಂದು ದಿಲ್ಲಿಯಲ್ಲಿ ನಡೆಯಲಿರುವ ಎಐಎಂಪಿಎಲ್‌ಬಿ ಸಭೆಯಲ್ಲಿ ಈ ಪ್ರಸ್ತಾಪದ ಬಗ್ಗೆ ಚರ್ಚೆ ನಡೆಯಲಿದೆ. ಈಗ ಉತ್ತರಪ್ರದೇಶದಲ್ಲಿ ಈ ರೀತಿಯ 40 ಕೋರ್ಟ್‌ಗಳಿವೆ. ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಇಂತಹ ನ್ಯಾಯಾಲಯ ಆರಂಭಿಸಲು ನಾವು ಯೋಜಿಸಿದ್ದೇವೆ. ಬೇರೆ ನ್ಯಾಯಾಲಯಕ್ಕೆ ಹೋಗುವ ಬದಲು ಶರಿಯಾ ಕೋರ್ಟ್‌ನಲ್ಲಿ ವಿವಾದ ಬಗೆಹರಿಸಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಎಐಎಂಪಿಎಲ್‌ಬಿ ಹಿರಿಯ ಸದಸ್ಯ ಝಪರ್ಯಾಬ್ ಜೀಲಾನಿ ತಿಳಿಸಿದ್ದಾರೆ. ಶರಿಯಾ ಕೋರ್ಟ್ ನಡೆಸಲು ಕನಿಷ್ಟ 50,000 ರೂ. ಅಗತ್ಯವಿದೆ. ಈ ವೆಚ್ಚವನ್ನು ಭರಿಸಲು ಸಂಪನ್ಮೂಲ ಕ್ರೋಢೀಕರಿಸುವ ಕುರಿತು ಜುಲೈ 15ರ ಸಭೆಯಲ್ಲಿ ಚರ್ಚಿಸಲಾಗುವುದು. ಶರಿಯಾ ಕಾನೂನಿನ ಬಗ್ಗೆ ವಕೀಲರು, ನ್ಯಾಯಾಧೀಶರು ಹಾಗೂ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ತಫ್‌ಹೀಮ್ ಎ ಶರೀಯತ್ (ಟಿಇಎಸ್) ಸಮಿತಿಯನ್ನು ಸಕ್ರಿಯಗೊಳಿಸಲಾಗುವುದು ಎಂದವರು ತಿಳಿಸಿದ್ದಾರೆ.
ಸಮಿತಿಯ ಮೂಲಕ ದೇಶದೆಲ್ಲೆಡೆ ವಿಚಾರಸಂಕಿರಣ, ಕಾರ್ಯಾಗಾರ ಸಂಘಟಿಸಲಾಗುವುದು. ಶರಿಯಾ ಕಾನೂನಿನ ಕುರಿತು ಇಸ್ಲಾಮಿಕ್ ವಿದ್ವಾಂಸರು ವಿವರವಾಗಿ ಮಾಹಿತಿ ನೀಡಲಿದ್ದಾರೆ ಎಂದವರು ತಿಳಿಸಿದ್ದಾರೆ. ಜುಲೈ 15ರ ಸಭೆಯಲ್ಲಿ ಶರೀಯತ್ ವಿಷಯವನ್ನು ಹೊರತುಪಡಿಸಿ, ಬಾಬರಿ ಮಸೀದಿ ಪ್ರಕರಣದ ಪ್ರಗತಿಯ ಅವಲೋಕನ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಗುವುದು ಎಂದ ಅವರು, ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವಿಳಂಬವಾಗಿ ತೀರ್ಪು ನೀಡಬೇಕೆಂದು ಮುಸ್ಲಿಮ್ ತಂಡದವರು ಬಯಸುತ್ತಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಅಲ್ಲಗಳೆದರು.