ರಸ್ತೆ ಸಂಚಾರಕ್ಕೆ ಅಡ್ಡಿ ಆರೋಪ: ಕಲ್ಯಾಣ ಮಂಟಪ ಮಾಲಕ, ವ್ಯವಸ್ಥಾಪಕರ ವಿರುದ್ಧ ದೂರು
ಬಂಟ್ವಾಳ, ಜು. 8: ರಸ್ತೆ ಸಂಚಾರಕ್ಕೆ ತೊಡಕುಂಟು ಮಾಡಿರುವ ಆರೋಪದ ಮೇರೆಗೆ ಕಲ್ಯಾಣ ಮಂಟಪವೊಂದರ ಮಾಲಕ ಹಾಗೂ ವ್ಯವಸ್ಥಾಪಕರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
ಬಂಟ್ವಾಳ ತಾಲೂಕಿನ ನೆಹರು ನಗರ ಎಂಬಲ್ಲಿ ಸಾಗರ್ ಮದುವೆ ಹಾಲ್‌ನ ಮಾಲಕ ಮುಹಮ್ಮದ್ ಸಾಗರ್ ಹಾಗೂ ವ್ಯವಸ್ಥಾಪಕ ಸುಲೈಮಾನ್ ಎಂಬರ ವಿರುದ್ಧ ಈ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ನೆಹರೂ ನಗರ ಎಂಬಲ್ಲಿ ನೂತನವಾಗಿ ಸಾಗರ್ ಎಂಬ ಹೆಸರಿನ ಮದುವೆ ಹಾಲ್‌ವೊಂದು ಉದ್ಘಾಟನೆಗೊಂಡು ಇಂದು ಪ್ರಥಮವಾಗಿ ಮದುವೆ ಕಾರ್ಯಕ್ರಮ ನಡೆದಿತ್ತು. ಈ ಮದುವೆಗೆ ಆಗಮಿಸಿದ ಜನರು ತಮ್ಮ ವಾಹನಗಳನ್ನು ಮದುವೆ ಹಾಲ್‌ನ ಒಳಗೆ ನಿಲ್ಲಿಸದೇ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ವಾಹನ ನಿಲ್ಲಿಸಿದ್ದರು. ಆದರೆ ಹಾಲ್ ಅಂಗಳದಲ್ಲಿ ವಾಹನ ಪಾರ್ಕ್‌ಗೆ ಸಾಕಷ್ಟು ಸ್ಥಳ ಅವಕಾಶವಿದ್ದರೂ ಕೂಡ ಇವರು ವಾಹನಗಳನ್ಮು ಒಳಗೆ ಬರಲು ಬಿಡದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಇಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಬಂಟ್ವಾಳ ನಗರ ಠಾಣಾ ಎಸ್ಸೈ ಚಂದ್ರಶೇಖರ್ ಮತ್ತು ಅವರ ಸಿಬ್ಬಂದಿ ಹಾಗೂ ಟ್ರಾಫಿಕ್ ಪೊಲೀಸರು ಸಂಚಾರಕ್ಕೆ ಅವಕಾಶ ಮಾಡಲು ಸಾಕಷ್ಟು ಹರಸಹಾಸ ಪಡಬೇಕಾಯಿತು.
ಕಟ್ಟಡದ ಮಾಲಕರು ಮತ್ತು ವ್ಯವಸ್ಥಾಪಕರು ಸಾರ್ವಜನಿಕ ರಸ್ತೆಯಲ್ಲಿ ಹೋಗುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ಅಡ್ಡಿಯನ್ನುಂಟು ಮಾಡಿದ್ದಾರೆಂದು ಇವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಎಸ್ಪಿ ರವಿಕಾಂತೇಗೌಡ ಅವರು ಮಾಹಿತಿ ನೀಡಿದ್ದಾರೆ.