ಮದುವೆ ಹಾಲ್ ಬಳಿ ನಿಲ್ಲಿಸುವ ಕಾರುಗಳ ವಿರುದ್ಧ ಕ್ರಮ: ಸಂಚಾರ ಪೊಲೀಸರ ಕಾರ್ಯಾಚರಣೆ
ಮಂಗಳೂರು, ಜು. 9: ಜಿಲ್ಲೆಯ ಹಲವೆಡೆ ಮದುವೆ ಮಂಟಪಗಳ ರಸ್ತೆಗಳ ಇಕ್ಕೆಲಗಳಲ್ಲಿ ಅನಧಿಕೃತವಾಗಿ ಕಾರುಗಳನ್ನು ಪಾರ್ಕಿಂಗ್ ಮಾಡುವ ಘಟನೆಗಳು ಹೆಚ್ಚಿವೆ. ಈ ಹಿನ್ನೆಲೆ ಎಚ್ಚೆತ್ತುಕೊಂಡ ನಗರ ಸಂಚಾರ ಪೊಲೀಸರು ನಗರದ ಮಿಲಾಗ್ರಿಸ್ ಹಾಲ್ ಮುಭಾಗದಲ್ಲಿ ಸೋಮವಾರ ಮಧ್ಯಾಹ್ನ ಕಾರುಗಳನ್ನು ಲಾಕ್ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ.
ನಗರದ ಮಿಲಾಗ್ರಿಸ್ ಹಾಲ್‌ನಲ್ಲಿ ಮದುವೆಗೆ ಬಂದಿದ್ದವರು ಕಾರುಗಳನ್ನು ಅನಧಿಕೃತವಾಗಿ ರಸ್ತೆಯ ಎರಡು ಬದಿಗಳಲ್ಲಿ ನಿಲ್ಲಿಸಿದ್ದರು. ಇದರಿಂದ ರಸ್ತೆ ಸಂಚಾರಕ್ಕೆ ತೊಡಕುಂಟಾಗುವುದೆಂಬ ಆರೋಪದ ಮೇರೆಗೆ ಸಂಚಾರ ಎಸಿಪಿ ಸೂಚನೆಯಂತೆ ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಬಂಟ್ವಾಳದ ಪಾಣೆಮಂಗಳೂರು ಸೇತುವೆ ಬಳಿ ನೂತನವಾಗಿ ನಿರ್ಮಾಣಗೊಂಡ ಸಾಗರ್ ಹಾಲ್ ಮದುವೆ ಕಾರ್ಯಕ್ರಮವಿತ್ತು. ಈ ಹಿನ್ನೆಲೆ ಹೆದ್ದಾರಿಯ ಎರಡೂ ಬದಿಯಲ್ಲಿ ವಾಹನ ನಿಲ್ಲಿಸಿದ್ದ ಪರಿಣಾಮ ಇಡೀ ಹೆದ್ದಾರಿ ಸಂಪೂರ್ಣ ಬ್ಲಾಕ್ ಆಗಿತ್ತು ಎನ್ನುವ ಆರೋಪದಲ್ಲಿ ಬಂಟ್ವಾಳ ಠಾಣೆ ಪೊಲೀಸರು ಮದುವೆ ಹಾಲ್ ಮಾಲಕ, ವ್ಯವಸ್ಥಾಪಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ಮದುವೆ ಹಾಲ್‌ನ ಒಳಗಡೆ ವಾಹನ ನಿಲ್ಲಿಸಲು ಸ್ಥಳಾವಕಾಶವಿದ್ದರೂ ಹೊರಗಡೆ ನಿಲ್ಲಿಸಿದ್ದರು. ವಾಹನಗಳನ್ನು ಒಳಗೆ ಬಿಡಲು ಒಪ್ಪಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದೇ ರಸ್ತೆ ಮೂಲಕ ಕೇಂದ್ರ ಸಚಿವ ಸದಾನಂದಗೌಡ ಮತ್ತು ಜಿಲ್ಲಾಧಿಕಾರಿಗಳ ವಾಹನ ಆಗಮಿಸಿದ್ದವು. ಈ ವೇಳೆ ಸಹಜವಾಗಿಯೇ ಸ್ಥಳಕ್ಕೆ ಬಂದ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ. ಬ್ಲಾಕ್‌ನಲ್ಲಿ ಸಿಕ್ಕಿಹಾಕಿಕೊಂಡ ಜಿಲ್ಲಾಧಿಕಾರಿ ಮತ್ತು ಸಚಿವರ ಕಾರುಗಳನ್ನು ಟ್ರಾಫಿಕ್ ಕ್ಲಿಯರ್ ಮಾಡಿ ಪೊಲೀಸರು ಕಳುಹಿಸಿಕೊಟ್ಟಿದ್ದಾರೆ.
ಪೊಲೀಸರನ್ನು ಮೇಲಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದು, ಬಳಿಕ ಮದುವೆ ಹಾಲ್ ಮಾಲಕ, ವ್ಯವಸ್ಥಾಪಕ ಮತ್ತು ಪಾರ್ಕ್ ಮಾಡಿದ ಕಾರುಗಳ ಮಾಲಕರ ವಿರುದ್ಧ ಕೇಸು ದಾಖಲಿಸಲಾಗಿತ್ತು.
ನಗರದ ಟಿಎಂಎ ಪೈ ಸಭಾಂಗಣದ್ದೂ ಇದೇ ಕಥೆಯಾಗಿದೆ. ಹಾಲ್ ಹಿಂದುಗಡೆ ಪಾರ್ಕಿಂಗ್‌ಗೆ ಮೀಸಲಿಟ್ಟ ಜಾಗದಲ್ಲಿ ಅನಧಿಕೃತವಾಗಿ ಕಿಚನ್ ವ್ಯವಸ್ಥೆಗೆ ಶೆಡ್ ನಿರ್ಮಿಸಿದ್ದಾರೆ. ವಾಹನಗಳನ್ನು ರಸ್ತೆ ಸುತ್ತಮುತ್ತ ಪಾರ್ಕಿಂಗ್ ಮಾಡಲಾಗುತ್ತಿದೆ. ಇದರಿಂದ ಉಂಟಾಗುವ ಟ್ರಾಫಿಕ್ ಸಮಸ್ಯೆಯಿಂದಾಗಿ ಇಡೀ ನಗರ ಸಂಚಾರದ ಮೇಲೆ ಪರಿಣಾಮ ಬೀರಲಿದೆ.
ನಗರದ ಬೋಳಾರ ಶಾದಿಮಹಲ್‌ನಲ್ಲಿಯೂ ಮದುವೆ ಇರುವ ಸಂದರ್ಭ ಸಂಚಾರ ಸಂಪೂರ್ಣ ಬಿಗಡಾಯಿಸುತ್ತದೆ. ಹಿಂದೆ ಈ ಶಾದಿಮಹಲ್ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಶಾದಿಮಹಲ್‌ಗೆ ಬರುವ ವಾಹನಗಳಿಗೆ ಪಾರ್ಕಿಂಗ್ ಇತ್ತು. ಈಗ ಅಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ವಾಗುತ್ತಿದೆ ಎಂದು ತಿಳಿದುಬಂದಿದೆ.
ಇದರಿಂದ ಮದುವೆಗೆ ಬರುವ ವಾಹನಗಳೆಲ್ಲ ಬೋಳಾರ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ಬೋಳಾರದಿಂದ ಜೆಪ್ಪು ಮಾರ್ಕೆಟ್‌ವರೆಗೆ ಪಾರ್ಕಿಂಗ್ ಮಾಡುತ್ತಿವೆ. ಒಂದು ಕಾರು ನಿಲ್ಲಿಸಲೂ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಇಂತಹ ಸ್ಥಿತಿ ನಿರ್ಮಾಣವಾಗಿದೆ. ಕಲ್ಯಾಣ ಮಂಟಪ, ಸಮುದಾಯ ಭವನಗಳು ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎನ್ನುವುದು ಸಾರ್ವಜನಿಕರ ಅಭಿಮತ.
ನಗರದ ಫಳ್ನೀರ್ ಸಮೀಪದ ಸೈಂಟ್ ಮೆರಿಸ್ ಬಳಿಯ ಎಕ್ಕೂರಿನ ಕೇಂದ್ರೀಯ ವಿದ್ಯಾಲಯದ ಬಳಿಯೂ ಇಂತಹದ್ದೇ ಕಾರಣಗಳಿಂದ ಸಂಚಾರ ಸಮಸ್ಯೆ ಬಿಗಡಾಯಿಸುತ್ತಿದೆ. ತೊಕ್ಕೊಟ್ಟು ಬಳಿಯ ಯುನಿಟಿ ಹಾಲ್‌ನಲ್ಲಿ ಮದುವೆ ಇದ್ದರಂತೂ ಟ್ರಾಫಿಕ್ ಜಾಮ್ ನಿರ್ಮಾಣವಾಗುವುದು ಸಾಮಾನ್ಯ ಎನ್ನುವಂತಾ ಗಿದೆ. ಆದರೆ ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಇದೇ ರೀತಿ ಮಂಗಳೂರು ನಗರ ಮತ್ತು ಜಿಲ್ಲೆಯ ಹಲವೆಡೆ ಖಾಸಗಿ ಕಾರ್ಯಕ್ರಮಗಳಿಗಾಗಿ ತಾಸುಗಟ್ಟಲೇ ಹೆದ್ದಾರಿ ಬ್ಲಾಕ್ ಆಗುತ್ತಿದೆ. ಇನ್ನಾದರೂ ಕಾನೂನು ಇಂಥವುಗಳ ವಿರುದ್ಧ ಪ್ರಯೋಗ ಮಾಡಬೇಕು ಎಂದು ಸಾರ್ವಜನಿಕರೊಬ್ಬರು ಆಗ್ರಹಿಸಿದ್ದಾರೆ.