ಪಡುಬಿದ್ರೆ: ಸಹಶಿಕ್ಷಕಿಯ ವರ್ಗಾವಣೆ ವಿರೋಧಿಸಿ ಪ್ರತಿಭಟನೆ
ಪಡುಬಿದ್ರೆ, ಜು. 9: ಇಲ್ಲಿನ ಸರ್ಕಾರಿ ಪಪೂ ಕಾಲೇಜಿನ ಪ್ರೌಢಶಾಲಾ ಸಹ ಶಿಕ್ಷಕಿಯನ್ನು ಮೂಳೂರು ಶಾಲೆಗೆ ವರ್ಗಾಯಿಸಿರುವುದನ್ನು ವಿರೋಧಿಸಿ ಹಾಗೂ ವರ್ಗಾವಣೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಪಡುಬಿದ್ರೆ ಗ್ರಾಮಸ್ಥರು ಶಾಲೆಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಶಾಲೆಯ ಎಸ್‌ಡಿಎಂಸಿ ನಿಕಟಪೂರ್ವ ಅಧ್ಯಕ್ಷ ವೈ. ಸುಕುಮಾರ್ ಮಾತನಾಡಿ, ಸಹಶಿಕ್ಷಕಿ ಸಂಧ್ಯಾ ಅವರನ್ನು ಮೂಳೂರಿನ ಶಾಲೆಗೆ ವರ್ಗಾವಣೆ ಮಾಡಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಇವರು ಗ್ರಾಮದ ಶಾಲೆಯ ಉತ್ತಮ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನು ಬೇರೆ ಶಾಲೆಗೆ ಏಕಾಏಕಿ ನಿಯೋಜನೆ ಮಾಡಿರುವುದು ಸರಿಯಲ್ಲ. ಪಡುಬಿದ್ರೆ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಈ ಸಂದರ್ಭದಲ್ಲಿ ಬೇರೆ ಶಾಲೆಗೆ ನಿಯೋಜನೆ ಮಾಡಿರುವುದು ಅವರ ಮೇಲೆ ಇಲಾಖೆ ನಡೆಸಿದ ದಬ್ಬಾಳಿಕೆಯಾಗಿದೆ ಎಂದು ಆರೋಪಿಸಿದರು.
ತಕ್ಷಣ ನಿಯೋಜನೆ ಆದೇಶವನ್ನು ಅಧಿಕಾರಿಗಳು ಹಿಂಪಡೆಯಬೇಕು, ಇಲ್ಲವಾದಲ್ಲಿ ಭ್ರಷ್ಟಾಚಾರ, ದುರಾಡಳಿತ ಹಾಗೂ ಸರ್ಕಾರಿ ಕರ್ತವ್ಯ ನಿರತ ಮಹಿಳೆಗೆ ಎಸಗಿದ ಬಗ್ಗೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸುಕುಮಾರ್ ಎಚ್ಚರಿಕೆ ನೀಡಿದರು.
ಆದರೆ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಪೋಷಕರೇ ಗೈರುಹಾಜರಾಗಿದ್ದರು. ಕೇವಲ ಕೆಲವು ಗ್ರಾಮಸ್ಥರು ಸೇರಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಆದರೆ ಶಾಲೆಯಲ್ಲಿ ಶಿಕ್ಷಕರಿಬ್ಬರ ಮಧ್ಯೆ ಹೊಂದಾಣಿಕೆ ಕೊರತೆ ಇದ್ದು, ಈ ಬಗ್ಗೆ ಹಲವು ಭಾರಿ ವಿದ್ಯಾರ್ಥಿಗಳ ಪೋಷಕರು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದರು.
ಪಡುಬಿದ್ರೆ ಗ್ರಾಪಂ ಅಧ್ಯಕ್ಷೆ ದಮಯಂತಿ ವಿ ಅಮೀನ್, ಸದಸ್ಯರಾದ ಅಶೋಕ್ ಸಾಲ್ಯಾನ್, ನಯನ, ರೋಟರಿ ಕ್ಲಬ್ ಅಧ್ಯಕ್ಷ ಗಣೇಶ್ ಆಚಾರ್ಯ, ಕಾರ್ಯದರ್ಶಿ ಸುಧಾಕರ, ರಮೀಜ್ ಹುಸೇನ್, ಪ್ರಕಾಶ್ ಪಿ ಆರ್, ವಿಜಯ ಆಚಾರ್ಯ, ಜೇಸಿಐ ಅಧ್ಯಕ್ಷ ಮಕರಂದ, ಲೀಲಾಧರ ಎಸ್ ಸಾಲಿಯಾನ್ ಉಪಸ್ಥಿತರಿದ್ದರು.
ಮೂಳೂರಿನಲ್ಲಿ ಗಣಿತ ಶಿಕ್ಷಕರು ಇರಲಿಲ್ಲ: ಮೂಳೂರು ಸರಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರು ಇರಲಿಲ್ಲ. ಆದರೆ ಪಡುಬಿದ್ರೆ ಪ್ರೌಢಶಾಲೆಯಲ್ಲಿ ಇಬ್ಬರು ಗಣಿತ ಶಿಕ್ಷಕರಿದ್ದಾರೆ. ಈ ಹಿನ್ನಲೆಯಲ್ಲಿ ಪಡುಬಿದ್ರೆಯ ಸಂಧ್ಯಾ ಸರಸ್ವತಿಯವರನ್ನು ಹೆಚ್ಚುವರಿಯಾಗಿ ಮೂಳೂರು ಶಾಲೆಗೆ ನಿಯೋಜನೆ ಮಾಡಲಾಗಿದೆ. ಶಿಕ್ಷಕಿಯ ನಿಯೋಜನೆ ಮಾಡದಂತೆ ಗ್ರಾಮಸ್ಥರಿಂದ ಮನವಿ ಬಂದಿತ್ತು. ಆದರೆ ಎಲ್ಲಾ ಮಕ್ಕಳು ಇಲಾಖೆಗೆ ಒಂದೇ ಆಗಿದ್ದು, ಅವರ ಹಿತದೃಷ್ಟಿಯಿಂದ ನಿಯೋಜನೆ ಅನಿವಾರ್ಯವಾಗಿದೆ.
- ಶೇಷಶಯನ ಕಾರಿಂಜೆ, ಡಿಡಿಪಿಐ ಉಡುಪಿ