×
Ad

ಗುರುಪುರ ಹಿಂದೂ ಹಿ.ಪ್ರಾ. ಶಾಲೆ ಉಳಿಸಲು ಪಣತೊಟ್ಟ ಗ್ರಾಮಸ್ಥರು

Update: 2018-07-09 19:10 IST

ಗುರುಪುರ, ಜು.9: ಶಿಕ್ಷಣ ಇಲಾಖೆಯ ಬೇಜವಾಬ್ದಾರಿಯಿಂದ ಮುಚ್ಚಲ್ಪಟ್ಟಿರುವ ಗುರುಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಪುನರಾರಂಭಕ್ಕೆ ಗುರುಪುರದ ಶ್ರೀ ಸತ್ಯದೇವತಾ ಸಭಾಗೃಹದಲ್ಲಿ ಹಳೆ ವಿದ್ಯಾರ್ಥಿಗಳು, ನಾಗರಿಕರು ಹಾಗೂ ಶಾಲಾ ಅಭಿಮಾನಿಗಳ ರವಿವಾರ ಸಭೆ ಸೇರಿ ಪಣತೊಟ್ಟಿದ್ದಾರೆ.

ಶತಮಾನ ಕಂಡ ಈ ಶಾಲೆಯು ಉಳಿಯಬೇಕಿದ್ದರೆ ಕ್ರಾಂತಿಕಾರಿ ಹೋರಾಟ ಅಗತ್ಯವಿದೆ. ಶಾಲೆಗೆ ಜಡಿದಿರುವ ಬೀಗ ಮುರಿದು ಹೊಸ ಬೀಗ ಹಾಕುವ ಮೂಲಕ ಶಾಲೆ ಉಳಿಸಲು ಪಣತೊಡಬೇಕಿದೆ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮಿ ಅಭಿಪ್ರಾಯಪಟ್ಟರು.

ಅನುದಾನಿತ ಶಾಲೆಯಾಗಿ ಮುಂದುವರಿಸಲು ಅಸಾಧ್ಯವಾದರೆ ಭಿಕ್ಷೆ ಎತ್ತೋಣ. ಶಾಲೆಯ ಹೆಸರಲ್ಲಿ ಭಿಕ್ಷೆ ಬೇಡಿದರೆ ಗೌರವ ಹೆಚ್ಚಿಸುತ್ತದೆ. ಶಾಲೆಗಾಗಿ ಯಾರೂ ಭಿಕ್ಷೆ ನಿರಾಕರಿಸುವುದಿಲ್ಲ ಎಂಬ ವಿಶ್ವಾಸ ನನಗಿದೆ. ಇಲ್ಲಿ ಹೊಸ ಆಡಳಿತ ಸಮಿತಿಯೊಂದಿಗೆ ಶಾಲೆ ಆರಂಭಿಸುವುದಾದರೆ ನಮ್ಮ ಮಠದಲ್ಲಿರುವ ಎಲ್ಲ ಮಕ್ಕಳನ್ನು ಈ ಶಾಲೆಗೆ ಸೇರಿಸುತ್ತೇನೆ ಎಂದು ರಾಜಶೇಖರಾನಂದ ಸ್ವಾಮಿ ಭರವಸೆ ನೀಡಿದರು.

ಒಂದು ಗ್ರಾಮದಲ್ಲಿ ಕನಿಷ್ಠ ಒಂದು ಶಾಲೆ ಇರಬೇಕೆನ್ನುವ ಸರಕಾರ, ಇಲ್ಲಿನ ಶಾಲೆ ಮುಚ್ಚಲು ನಿರ್ಧರಿಸರುವುದು ದುರಂತ. ಶಾಲೆ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸೋಣ. ಆರ್ಥಿಕ ಹಾಗೂ ಇತರ ಸಂಪನ್ಮೂಲ ಕ್ರೋಡಿಕರಿಸೋಣ ಎಂದು ಹಳೆ ವಿದ್ಯಾರ್ಥಿ ರಾಜೀವ ಶೆಟ್ಟಿ ಸಲ್ಲಾಜೆ ಹೇಳಿದರು.

ತಾಪಂ ಮಾಜಿ ಸದಸ್ಯ ಯಶವಂತ ಆಳ್ವ ಮಾತನಾಡಿ ಶಾಲೆ ಉಳಿಸುವ ಪ್ರಥಮ ಹಂತದಲ್ಲಿ ಶಿಕ್ಷಣ ಮತ್ತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಮುಂದಿನ ಹೆಜ್ಜೆ ಇಡಬೇಕು. ಅದಕ್ಕಾಗಿ ಸಮಿತಿಯೊಂದರ ರಚನೆಯಾಗಬೇಕು. ಈಗ ಪ್ರಾಥಮಿಕ ಶಾಲೆ ಮುಚ್ಚಲಾಗಿದೆ. ಇದರ ಪರಿಣಾಮ ಪ್ರೌಢಶಾಲೆಯ ಮೇಲೆ ಬೀಳಲಿದೆ ಎಂದರು.

ಹಳೆ ವಿದ್ಯಾರ್ಥಿಗಳಾದ ಕಿಟ್ಟಣ್ಣ ರೈ, ಧನಂಜಯ ಗುರುಪುರ, ಜಿ. ಲಕ್ಷ್ಮಣ ಶೆಟ್ಟಿ, ಉದ್ಯಮಿ ಶಾಹುಲ್ ಹಮೀದ್, ಕರಾವಳಿ ವೀರಶೈವ ಮಹಾ ಸಂಘದ ಪ್ರೊ. ಜಯಪ್ಪ ಮಾತಾಡಿದರು.

ವೇದಿಕೆಯಲ್ಲಿ ತಾಪಂ ಸದಸ್ಯ ಸಚಿನ್ ಅಡಪ, ಉಪನ್ಯಾಸಕ ಡಾ. ದಿನೇಶ್ ಪೈ, ದೇವದಾಸ ಅಂಚನ್, ಉದ್ಯಮಿ ಸತೀಶ್, ನಿವೃತ್ತ ಸರಕಾರಿ ಅಧಿಕಾರಿ ಶೀನಪ್ಪಕೊಟ್ಟಾರಿ ಉಪಸ್ಥಿತರಿದ್ದರು. ಅಂಚೆ ಸಿಬ್ಬಂದಿ ಜಿ. ರತ್ನಾಕರ ಕಾರ್ಯಕ್ರಮ ನಿರೂಪಿಸಿದರು. ಹಳೆ ವಿದ್ಯಾರ್ಥಿ ಮೋಹನ್ ಪ್ರಭು ಸ್ವಾಗತಿಸಿ ವಂದಿಸಿದರು.

ಸಭೆ ಮುಗಿದ ಬಳಿಕ ಗುರುಪುರ ಪೇಟೆಯ ಮೂಲಕ ಮೆರವಣಿಯಲ್ಲಿ ಸಾಗಿದ ಗ್ರಾಮಸ್ಥರು ಶಾಲೆಗೆ ಜಡಿದ ಬೀಗ ಮುರಿದರಲ್ಲದೆ ಶಾಲೆಯೊಳಗೆ ಸಭೆ ನಡೆಸಿ ಗುರುಪುರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ರಕ್ಷಣಾ ಸಮಿತಿ ರಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News