ನ್ಯಾಯಾಲಯದ ಆದೇಶವನ್ನು ಅಕ್ಷರಶಃ ಪಾಲಿಸಿ: ಲೆ.ಗವರ್ನರ್‌ಗೆ ಕೇಜ್ರಿವಾಲ್ ಆಗ್ರಹ

Update: 2018-07-09 14:35 GMT

ಹೊಸದಿಲ್ಲಿ, ಜು.9: ದಿಲ್ಲಿ ಸರಕಾರ ಮತ್ತು ಕೇಂದ್ರದ ನಡುವಿನ ಅಧಿಕಾರಕ್ಕಾಗಿ ನಡೆಯುವ ಸೆಣಸಾಟದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸಂಪೂರ್ಣ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅದರಲ್ಲಿ ಕೆಲವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲು ಸಾಧ್ಯವೇ ಎಂದು ದಿಲ್ಲಿಯ ಲೆಗವರ್ನರ್ ಅನಿಲ್ ಬೈಜಾಲ್‌ರನ್ನು ಪ್ರಶ್ನಿಸಿದ್ದಾರೆ.

ನ್ಯಾಯಾಲಯದ ಆದೇಶವನ್ನು ಅಕ್ಷರಶಃ ಪಾಲಿಸಿ ಎಂದು ಬೈಜಾಲ್‌ರಿಗೆ ಪತ್ರದ ಮೂಲಕ ಆಗ್ರಹಿಸಿರುವ ಕೇಜ್ರಿವಾಲ್, ಕೇಂದ್ರದ ಗೃಹ ಸಚಿವಾಲಯ ಸುಪ್ರೀಂಕೋರ್ಟ್‌ನ ಆದೇಶದ ವ್ಯಾಖ್ಯಾನ ನಡೆಸುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಯಾವುದೇ ಸ್ಪಷ್ಟನೆಯ ಅಗತ್ಯವಿದ್ದರೆ ತಕ್ಷಣ ಸುಪ್ರೀಂಕೋರ್ಟ್ ಮೊರೆಹೋಗಿ. ಆದರೆ ದಯವಿಟ್ಟು ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಬೇಡಿ ಎಂದು ಲೆಗವರ್ನರ್‌ರನ್ನು ಒತ್ತಾಯಿಸಿದ್ದಾರೆ. ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ಸ್ವೀಕರಿಸುವ ಬದಲು ಆಯ್ದ ಕೆಲವನ್ನು ಮಾತ್ರ ಒಪ್ಪಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದ ಕೇಜ್ರಿವಾಲ್, ಆದೇಶವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಿ ಅಥವಾ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಿ. ಆದರೆ ಆದೇಶದ ಕೆಲವು ಅಂಶವನ್ನು ಮಾತ್ರ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದೇಶದ ಈ ಪ್ಯಾರಾವನ್ನು ಒಪ್ಪಿದ್ದೇನೆ. ನಂತರದ ಪ್ಯಾರಾ ನನಗೆ ಒಪ್ಪಿಗೆಯಿಲ್ಲ ಎಂದು ಹೇಗೆ ಹೇಳುತ್ತೀರಿ ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಈ ಮಧ್ಯೆ, ಸೋಮವಾರ ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆಗೆ ಲೆಗವರ್ನರ್ ಆಕ್ಷೇಪದ ಹೊರತಾಗಿಯೂ ಕೇಜ್ರಿವಾಲ್ ಅಂಗೀಕಾರ ನೀಡಿದ್ದಾರೆ. ದಿಲ್ಲಿಯ ಪ್ರತೀ ವಿಧಾನಸಭಾ ಕ್ಷೇತ್ರದಿಂದ 1,100 ಹಿರಿಯ ನಾಗರಿಕರಿಗೆ ಉಚಿತವಾಗಿ ಯಾತ್ರೆಯನ್ನು ವ್ಯವಸ್ಥೆಗೊಳಿಸುವ ಯೋಜನೆಯನ್ನು ಅಂಗೀಕರಿಸಲಾಗಿದೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News