ಉಡುಪಿ: ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ 324.6 ಮಿ.ಮೀ.ಮಳೆ
ಉಡುಪಿ, ಜು.9: ಜು. 6ರಿಂದ 8ರವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 324.9ಮಿ.ಮೀ. ಮಳೆಯಾಗಿದ್ದು, ಇದರಿಂದ ಜಿಲ್ಲೆಯಲ್ಲಿ ಆಪಾರವಾದ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿದೆ. ಸತತವಾಗಿ ಸುರಿದ ಮಳೆಯಿಂದ ಉಡುಪಿ, ಕಾಪು ಹಾಗೂ ಕಾರ್ಕಳ ತಾಲೂಕಿನ ನದಿ ತೀರದ ಗ್ರಾಮಗಳ ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ನೆರೆ ಪರಿಸ್ಥಿತಿ ತಲೆದೋರಿದೆ.
ಮೂರು ದಿನಗಳಲ್ಲಿ ಯಾವುದೇ ಜೀವಹಾನಿ ಸಂಭವಿಸಿರದಿದ್ದರೂ, ನೆರೆ ನೀರು ಹಲವು ಮನೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಇಂದು ರಾಜ್ಯ ಸರಕಾರಕ್ಕೆ ಕಳುಹಿಸಿದ ವರದಿಯಲ್ಲಿ ತಿಳಿಸಿದ್ದಾರೆ.
ಕಂದಾಯ ಇಲಾಖೆ (ವಿಪತ್ತು ಮತ್ತು ನಿರ್ವಹಣೆ) ಕಾರ್ಯದರ್ಶಿಗಳಿಗೆ ಕಳುಹಿಸಿರುವ ವರದಿಯಲ್ಲಿ ಪ್ರತಿ ತಾಲೂಕಿನಲ್ಲಿ ಮೂರು ದಿನಗಳ ಪರಿಸ್ಥಿತಿ, ಆಗಿರುವ ಹಾನಿ, ಕೈಗೊಂಡಿರುವ ಪರಿಹಾರದ ಕ್ರಮಗಳನ್ನು ವಿವರಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ರಸ್ತೆ ಹಾಗೂ ಸೇತುವೆಗಳಿಗೆ ಹಾನಿಯಾಗಿದ್ದರೆ, ಕೆಲವು ಕಡೆಗಳಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ನಷ್ಟವುಂಟಾಗಿದೆ. ಆದರೂ ಪರಿಸ್ಥಿತಿಯನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಮುಂಜಾಗ್ರತಾ ಹಾಗೂ ರಕ್ಷಣಾ ಕ್ರಮವಾಗಿ ಜು. 7ರಂದೇ ಎನ್‌ಡಿಆರ್‌ಎಫ್ ತಂಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ನೌಕಾ ತಂಡವನ್ನು ಅಗತ್ಯ ಪರಿಕರಗಳೊಂದಿಗೆ ಜಿಲ್ಲೆಗೆ ಕರೆಸಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲಾಗಿದೆ. ಉಡುಪಿ ನಗರಸಭಾ ವ್ಯಾಪ್ತಿಯ 75 ಬಡಗುಬೆಟ್ಟು, ಶಿವಳ್ಳಿ ಗ್ರಾಮದ 6 ಕುಟುಂಬ, ಪುತ್ತೂರು ಗ್ರಾಮದ ಕೊಡಂಕೂರಿನ 5 ಕುಟುಂಬ, ಅಂಬಲಪಾಡಿಯ 3, ಕಿದಿಯೂರು ಗ್ರಾಮದ 6, ಉದ್ಯಾವರ ಗ್ರಾಮದ 4, ಕೊರಂಗ್ರಪಾಡಿ ಗ್ರಾಮದ 13 ಕುಟುಂಬಗಳನ್ನು ಆಯಾ ಗ್ರಾಮಗಳಲ್ಲಿ ತೆರೆದ ಗಂಜಿ ಕೇಂದ್ರಗಳಿಗೆ ಕಳುಹಿಸಲಾಗಿದೆ. ಮಳೆ ಹಾಗೂ ನೆರೆ ಹಾವಳಿ ಕಡಿಮೆಯಾದ ಬಳಿಕ ಈ 100ಕ್ಕೂ ಅಧಿಕ ಮಂದಿಯನ್ನು ತಮ್ಮ ತಮ್ಮ ಮನೆಗಳಿಗೆ ಕಳುಹಿಸಲಾಗಿದೆ. ಅಲ್ಲದೇ ತಾಲೂಕಿನ ಹಲವು ಮನೆಗಳಿಗೆ ಮಳೆ-ಗಾಳಿಯಿಂದ ಅಪಾರ ಹಾನಿ ಸಂಭವಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕಾಪು ತಾಲೂಕಿನಲ್ಲಿ ಉಳಿಯಾರಗೋಳಿ ಗ್ರಾಮದ ಜಲಜ ಪೂಜಾರ್ತಿ ಎಂಬವರ ಕರು ನೆರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಕೃತಕ ನೆರೆ ಉಂಟಾಗಿದೆ. ನೆರೆ ಪೀಡಿತ ಪ್ರದೇಶದ ಜನರನ್ನು ಸಕಾಲದಲ್ಲಿ ರಕ್ಷಿಸಲಾಗಿದೆ. ಬೆಳ್ಳೆ ಗ್ರಾಮದ 6, ಕಟ್ಟಿಂಗೇರಿ ಗ್ರಾಮದ 9, ಯೇಣಗುಡ್ಡೆಯಲ್ಲಿ 7, ಮೂಡಬೆಟ್ಟು ಗ್ರಾಮದಲ್ಲಿ 5, ಇನ್ನಂಜೆ ಗ್ರಾಮದ 3, ಪಾಂಗಾಳದ 20, ಬೆಳಪು ಗ್ರಾಮದ 3, ಕುರ್ಕಾಲು ಗ್ರಾಮದ 27, ಪಾದೆಬೆಟ್ಟು 4, ಪಲಿಮಾರು 24, ನಂದಿಕೂರು 40, ಹೆಜಮಾಡಿ 75, ತೆಂಕ 6, ಕುತ್ಯಾರು 5, ಶಿರ್ವ 10, ಉಳಿಯಾರಗೋಳಿ 40 ಹಾಗೂ ಮಜೂರು ಗ್ರಾಮದ 45 ಮಂದಿ ಸೇರಿದಂತೆ ಒಟ್ಟು 335 ಮಂದಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.
ಇವರಿಗಾಗಿ ಪಲಿಮಾರು, ಕಟಪಾಡಿ, ಮಜೂರು ಗ್ರಾಮಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಕಾಪುವಿನ ಶ್ರೀಲಕ್ಷ್ಮೀಜನಾರ್ದನ ದೇವಸ್ಥಾನದಲ್ಲೂ ಒಂದು ಗಂಜಿ ಕೇಂದ್ರ ತೆರೆಯಲಾಗಿತ್ತು. ಕೆಲವು ಗ್ರಾಮಗಳ ಇನ್ನೂ ಹಲವು ಮಂದಿ ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ 15ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಅಂದಾಜು 11.85 ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.
ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ 9 ಮನೆಗಳು ಜಲಾವೃತಗೊಂಡಿದ್ದು ಇಲ್ಲಿನ 27 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿ ಇವರಿಗೆಲ್ಲಾ ಅಲ್ಲಿನ ದೇವಸ್ಥಾನದಲ್ಲಿ ಭೋಜನ ವ್ಯವಸ್ಥೆ ಮಾಡಲಾಯಿತು. ಮಳೆ ಹಾಗೂ ನೆರೆ ಇಳಿದ ಬಳಿಕ ಅವರನ್ನು ಮನೆಗಳಿಗೆ ಕಳುಹಿಸಲಾಯಿತು. ಅದೇ ರೀತಿ ಸೂಡ ಗ್ರಾಮದಲ್ಲಿ 4 ಮನೆಗಳ ಜನರನ್ನು ರಕ್ಷಿಸಲಾಯಿತು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಜಿಲ್ಲೆಯಲ್ಲಿ 3.71 ಕೋಟಿ ರೂ.ನಷ್ಟದ ಅಂದಾಜು, 79.57 ಲಕ್ಷ ಪರಿಹಾರ
ಜಿಲ್ಲೆಯಲ್ಲಿ ಕಳೆದ ಎ.1ರಿಂದ ಜು.9ರವರೆಗೆ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯಲ್ಲಿ ಸುಮಾರು 3.71 ಕೋಟಿ ರೂ.ಗಳಷ್ಟು ಆಸ್ತಿಪಾಸ್ತಿ, ಸೊತ್ತುಗಳಿಗೆ ಹಾನಿಯನ್ನು ಅಂದಾಜಿಸಲಾಗಿದ್ದು, ಈವರೆಗೆ ಒಟ್ಟು 79.57 ಲಕ್ಷ ರೂ.ಗಳ ಪರಿಹಾರವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ವಿವರಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 4 ಮಾನವ ಜೀವ ಹಾನಿಯಾಗಿದ್ದು, ಇವುಗಳಿಗೆ 20,00,000 ರೂ. ಪರಿಹಾರವನ್ನು ವಿತರಿಸಲಾಗಿದೆ. ಸಿಡಿಲಿನಿಂದ ಇಬ್ಬರು ಗಾಯಗೊಂಡಿದ್ದು 16,900ರೂ. ಪರಿಹಾರ ನೀಡಲಾಗಿದೆ. 14 ಜಾನುವಾರು ಗಳ ಜೀವಹಾನಿಯಾಗಿದ್ದು 3,67,000ರೂ. ನಷ್ಟದಲ್ಲಿ 9 ಜಾನುವಾರುಗಳಿಗೆ 1,79,000ರೂ. ಪರಿಹಾರ ವಿತರಿಸಲಾಗಿದೆ. ತೋಟಗಾರಿಕಾ ಬೆಳೆ ಹಾನಿಯ 198 ಪ್ರಕರಣಗಳಲ್ಲಿ 21,99,800 ನಷ್ಟದ ಅಂದಾಜು ಮಾಡಲಾಗಿದ್ದು, ಇವುಗಳಲ್ಲಿ 161 ಪ್ರಕರಣಗಳಲ್ಲಿ ಒಟ್ಟು 5,81,029 ರೂ.ಗಳ ಪರಿಹಾರ ವಿತರಿಸಲಾಗಿದೆ.
ಮಳೆಯಿಂದ ವಾಸ್ತವ್ಯದ 47 ಪಕ್ಕಾ ಮನೆಗಳಿಗೆ 40,46,214ರೂ. ನಷ್ಟ ವಾಗಿದ್ದು, ಇವುಗಳಲ್ಲಿ ಒಟ್ಟು 36 ಪ್ರಕರಣಗಳಲ್ಲಿ 2,92,900 ರೂ. ಪರಿಹಾರ ವಿತರಿಸಲಾಗಿದೆ. ವಾಸ್ತವ್ಯದ 759 ಮನೆಗಳಿಗೆ ಭಾಗಶ: ಹಾನಿಯಾಗಿದ್ದು 2,48,94,579 ರೂ. ನಷ್ಟದ ಅಂದಾಜು ಮಾಡಲಾಗಿದೆ. ಇವುಗಳಲ್ಲಿ 604 ಪ್ರಕರಣಗಳಲ್ಲಿ 48,47,053 ರೂ.ಗಳ ಪರಿಹಾರ ನೀಡಲಾಗಿದೆ. ಅಲ್ಲದೇ ಮಳೆಯಿಂದ 8 ಕಚ್ಛಾ ಮನೆ ಸಂಪೂರ್ಣ ಹಾನಿಯಾಗಿ 4,70,100ರೂ. ನಷ್ಚ ವಾಗಿದ್ದು 3 ಮನೆಗಳಿಗೆ 9,600ರೂ. ಪರಿಹಾರ ವಿತರಣೆಯಾಗಿದೆ.
ಉಳಿದಂತೆ ಅಂಗನವಾಡಿ, ಆವರಣಗೋಡೆ, ಬಾವಿ ಕುಸಿತದ 29 ಪ್ರಕರಣ ಗಳಲ್ಲಿ 29.55 ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ. ಒಟ್ಟಾರೆ ಯಾಗಿ ಜಿಲ್ಲೆಯಲ್ಲಿ ಈವರೆಗೆ 1076 ಪ್ರಕರಣಗಳಲ್ಲಿ 3,71,46,443 ರೂ. ನಷ್ಟವನ್ನು ಅಂದಾಜಿಸಲಾಗಿದ್ದು, ಇವುಗಳಲ್ಲಿ 828 ಪ್ರಕರಣಗಳಲ್ಲಿ ಒಟ್ಟು 79,57,082 ರೂ. ಪರಿಹಾರವನ್ನು ವಿತರಿಸಲಾಗಿದೆ ಎಂದು ಸರಕಾರಕ್ಕೆ ನೀಡಲಾದ ವರದಿಯಲ್ಲಿ ವಿವರಿಸಲಾಗಿದೆ.