ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಕಲಾಪ ತಡೆಗೆ ಪಟೇಲ್ ಮನವಿಗೆ ಉತ್ತರ ಕೋರಿದ ಸುಪ್ರೀಂ
ಹೊಸದಿಲ್ಲಿ,ಜು.9: ರಾಜ್ಯಸಭೆಗೆ ತನ್ನ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆಯನ್ನು ನಡೆಸುತ್ತಿರುವ ಗುಜರಾತ್ ಉಚ್ಚ ನ್ಯಾಯಾಲಯದ ಕಲಾಪಗಳಿಗೆ ತಡೆಯನ್ನು ಕೋರಿ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರು ಸಲ್ಲಿಸಿರುವ ಅರ್ಜಿಗೆ ಉತ್ತರಿಸುವಂತೆ ಬಿಜೆಪಿ ನಾಯಕ ಹಾಗು ಅರ್ಜಿದಾರ ಬಲವಂತಸಿಂಹ ರಾಜಪೂತ ಅವರಿಗೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಸೂಚಿಸಿದೆ.
ರಾಜಪೂತ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ತಾನು ನಿರ್ಧರಿಸಬೇಕಿರುವ ವಿಷಯಗಳನ್ನು ರೂಪಿಸಲು ಗುಜರಾತ್ ಉಚ್ಚ ನ್ಯಾಯಾಲಯಕ್ಕೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಅವಕಾಶವನ್ನು ನೀಡಿತಾದರೂ,ಆ ಬಳಿಕ ಈ ವಿಷಯದಲ್ಲಿ ಮುಂದುವರಿಯದಂತೆ ಸ್ಪಷ್ಟಪಡಿಸಿತು.
ರಾಜಪೂತ ಸಲ್ಲಿಸಿರುವ ಅರ್ಜಿಯು ಅಂಗೀಕಾರಾರ್ಹವಲ್ಲ ಮತ್ತು ಅದನ್ನು ವಜಾಗೊಳಿಸುವ ಅಗತ್ಯವಿದೆ ಎಂದು ಪಟೇಲ್ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.
ಪಟೇಲ್ ಅವರು ಕಳೆದ ವರ್ಷ ನಡೆದ ಚುನಾವಣೆಯಲ್ಲಿ ರಾಜಪೂತ ಅವರನ್ನು ಪರಾಭವಗೊಳಿಸಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಇದರ ಬೆನ್ನಲ್ಲೇ ಇಬ್ಬರು ಬಂಡುಕೋರ ಶಾಸಕರ ಮತಗಳನ್ನು ಅಸಿಂಧುಗೊಳಿಸಿದ್ದ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ರಾಜಪೂತ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.