×
Ad

ಅನಾರೋಗ್ಯ ಪೀಡಿತ ತಾಯಿಯನ್ನು ಭೇಟಿಯಾದ ಬನ್ನಂಜೆ ರಾಜ

Update: 2018-07-09 20:52 IST

ಉಡುಪಿ, ಜು.9: ಕಳೆದ ನಾಲ್ಕು ವರ್ಷಗಳಿಂದ ಬೆಳಗಾವಿ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜ, ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅನುಮತಿಯಂತೆ ಪೊಲೀಸ್ ಸರ್ಪಗಾವಲಿನಲ್ಲಿ ಇಂದು ಮಲ್ಪೆ ಕಲ್ಮಾಡಿಯ ಸಸಿತೋಟ ಎಂಬಲ್ಲಿರುವ ತನ್ನ ಮನೆಯಲ್ಲಿ ಅನಾರೋಗ್ಯ ಪೀಡಿತ ತಾಯಿಯನ್ನು ಭೇಟಿಯಾಗಿ, ಬೆಳಗ್ಗೆಯಿಂದ ಸಂಜೆಯವರೆಗೆ ಸುಮಾರು 9 ಗಂಟೆಗಳ ಕಾಲ ತನ್ನ ಕುಟುಂಬದ ಜೊತೆ ಕಳೆದಿದ್ದಾನೆ.

ಉಡುಪಿ ನಗರ ಪೊಲೀಸ್ ಠಾಣೆಯ ಲಾಕಪ್‌ನಲ್ಲಿ ಜು.8ರ ಸಂಜೆಯಿಂದ ಉಳಿದುಕೊಂಡಿದ್ದ ಬನ್ನಂಜೆ ರಾಜನನ್ನು ಇಂದು ಬೆಳಗ್ಗೆ 9ಗಂಟೆ ಸುಮಾರಿಗೆ ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದ ಪೊಲೀಸ್ ತಂಡ ಬಿಗಿ ಭದ್ರತೆಯಲ್ಲಿ ಮಲ್ಪೆ ಸಮೀಪದ ಕಲ್ಮಾಡಿಯ ಸಸಿತೋಟದಲ್ಲಿರುವ ಆತನ ಮನೆಗೆ ಕರೆದೊಯ್ದು ಅನಾರೋಗ್ಯದಿಂದ ಬಳಲುತ್ತಿದ್ದ 80ವರ್ಷ ಪ್ರಾಯದ ಆತನ ತಾಯಿ ವಿಲಾಸಿನಿ ಜೊತೆ ಇರಲು ಅವಕಾಶ ಕಲ್ಪಿಸಿದರು.

ಇದೇ ವೇಳೆ ಬನ್ನಂಜೆ ರಾಜನ ತಂದೆ ಎಂ.ಸುಂದರ್ (81), ಸಹೋದರ ಅರುಣ್ ಮತ್ತು ಅವರ ಪತ್ನಿ, ಮಕ್ಕಳು, ಕೆಲವು ವರ್ಷಗಳ ಹಿಂದೆ ನಿಧನರಾದ ಇನ್ನೊಬ್ಬ ಸಹೋದರ ಕಿರಣ್ ಅವರ ಪತ್ನಿ ವಸಂತಿ ಹಾಗೂ ಇಬ್ಬರು ಮಕ್ಕಳು ಮತ್ತು ಇಂದು ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ಬನ್ನಂಜೆ ರಾಜನ ಪತ್ನಿ ಸೋನಂ ಹಾಗೂ ಇಬ್ಬರು ಮಕ್ಕಳು ಮನೆಯಲ್ಲಿದ್ದರು. ಬನ್ನಂಜೆ ತಾಯಿ ನಿವೃತ್ತ ಶಿಕ್ಷಕಿಯಾಗಿದ್ದು, ತಂದೆ ನಿೃತ್ತ ಕಂದಾಯ ನಿರೀಕ್ಷಕರಾಗಿದ್ದಾರೆ.

ಬೆಳಗ್ಗೆಯಿಂದ ಸಹೋದರ ಹೊರಗಿನಿಂದ ತರಿಸಲಾದ ಉಪಹಾರ ಹಾಗೂ 11ಗಂಟೆ ಸುಮಾರಿಗೆ ಹೊಟೇಲಿನಿಂದ ತಂದ ಇಡ್ಲಿಯನ್ನು ಪೊಲೀಸರು ಪರಿ ಶೀಲಿಸಿ ಒಳಗೆ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಿದರು. ಮಧ್ಯಾಹ್ನ ಕೋಳಿ ರೊಟ್ಟಿ ಹಾಗೂ ಮೀನಿನ ಖಾದ್ಯವನ್ನು ಮನೆಯವರೇ ತಯಾರಿಸಿ ಬನ್ನಂಜೆ ರಾಜನಿಗೆ ನೀಡಿದರೆಂದು ಕುಟುಂಬದ ಮೂಲಗಳು ತಿಳಿಸಿವೆ.

ಬೆಳಗ್ಗೆ ಬನ್ನಂಜೆ ರಾಜನ ಮನೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭೂಗತನಾಗಿದ್ದ ಬನ್ನಂಜೆ ರಾಜನನ್ನು 2015ರ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದ ಮೊರಕ್ಕೊದಲ್ಲಿ ಪೊಲೀಸರು ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದರು. ಕಾರವಾರ ಕೊಲೆ ಪ್ರಕರಣ, ಉಡುಪಿ ಐರೋಡಿ ಜ್ಯುವೆಲ್ಲರ್ಸ್‌ ಶೂಟೌಟ್ ಸೇರಿ ದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಬನ್ನಂಜೆ ರಾಜ ಕಳೆದ ನಾಲ್ಕು ವಷಗರ್ಳಿಂದ ಬೆಳಗಾವಿಯ ಜೈಲಿನಲ್ಲಿದ್ದಾನೆ.

ಮತ್ತೆ ಲಾಕಪ್‌ನಲ್ಲಿ ರಾತ್ರಿವಾಸ

ಕಲ್ಮಾಡಿಯ ಮನೆಯಿಂದ ಬನ್ನಂಜೆ ರಾಜನನ್ನು ಸಂಜೆ ಆರು ಗಂಟೆಗೆ ಪೊಲೀಸರು ಉಡುಪಿ ನಗರ ಠಾಣೆಗೆ ಕರೆ ತಂದಿದ್ದು, ಠಾಣೆಯ ಲಾಕಪ್‌ನಲ್ಲಿ ಇರಿಸಿದ್ದಾರೆ. ಈ ಮೂಲಕ ಬನ್ನಂಜೆ ರಾಜ ರಾತ್ರಿಯಿಂದ ಬೆಳಗ್ಗೆಯವರೆಗೆ ಲಾಕಪ್‌ನಲ್ಲಿಯೇ ಉಳಿದುಕೊಳ್ಳಲಿದ್ದಾನೆ.

ಲಾಕಪ್‌ನಲ್ಲಿಯೂ ಮೂರು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಕಣ್ಗಾವಲು ಇರಿಸಲಾಗಿದೆ. ಪೊಲೀಸರು ನಾಳೆ ಬೆಳಗ್ಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಿಗಿ ಭದ್ರತೆಯಲ್ಲಿ ರಸ್ತೆ ಮಾರ್ಗದ ಮೂಲಕ ಬೆಳಗಾವಿ ಜೈಲಿಗೆ ಕರೆದುಕೊಂಡು ಹೋಗಲಿದ್ದಾರೆ ಎಂದು ಪೊಲೀಸ್ ಮೂಲ ಗಳು ತಿಳಿಸಿವೆ.

ಮನೆಯಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು
ಮಲ್ಪೆ- ಉಡುಪಿ ಮುಖ್ಯ ರಸ್ತೆಯಿಂದ 300 ಮೀಟರ್ ದೂರದಲ್ಲಿರುವ ಬನ್ನಂಜೆ ರಾಜನ ಮನೆಯ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್ ಭದ್ರತೆ ಒದಗಿಸಲಾ ಗಿತ್ತು. ಮುಖ್ಯರಸ್ತೆ ಹಾಗೂ ಒಳಗಿನ ರಸ್ತೆಯಲ್ಲಿ ಒಂದೊಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿತ್ತು.

ಮನೆಯಿಂದ 100 ಮೀಟರ್ ದೂರದಲ್ಲಿ ಹಾಗೂ ಮನೆಯ ಗೇಟು ಎದುರು ಬ್ಯಾರಿಕೇಡ್‌ಗಳನ್ನು ಹಾಕಿ ತಡೆಯೊಡ್ಡಲಾಗಿತ್ತು. ಅಲ್ಲದೆ ಮನೆಯ ಒಳಗೆ ಹಾಗೂ ಹೊರಗೆ ನಾಲ್ಕು ಸಿಸಿ ಕ್ಯಾಮೆರಾವನ್ನು ಇಲಾಖೆ ವತಿಯಿಂದ ಅಳವಡಿಸಿ ಕಣ್ಗಾವಲು ವಹಿಸಲಾಗಿತ್ತು. ಮನೆಯ ಸುತ್ತ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಮನೆಯೊಳಗೆ ಸಂಬಂಧಿಕರು, ನೆರೆಹೊರೆಯವರು ಹಾಗೂ ಮಾಧ್ಯಮದರು ಸೇರಿದಂತೆ ಯಾರಿಗೂ ಪ್ರವೇಶ ಇರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News