ಕೆಡುಕಿನ ನಿರ್ಮೂಲನೆ ಸಮಾಜದ ನೈಜ ಅಗತ್ಯ: ಡಾ. ಘಾಝೀ
ಉಡುಪಿ, ಜು.9: ಒಳಿತನ್ನು ಸ್ಥಾಪಿಸುವುದು, ಕೆಡುಕಿನ ನಿರ್ಮೂಲನೆ ಸಮಾಜದ ನೈಜ ಅಗತ್ಯವಾಗಿದೆ ಎಂದು ಶಾಂತಪುರಂ ಇಸ್ಲಾಮಿಯ ಕಾಲೇಜಿನ ಕುರಾನ್ ವಿಭಾಗದ ಮುಖ್ಯಸ್ಥ ಡಾ.ಮುಹ್ಯುದ್ದೀನ್ ಘಾಝೀ ಹೇಳಿದ್ದಾರೆ.
ಜಮಾಅತೆ ಇಸ್ಲಾಮಿ ಜಿಲ್ಲಾ ವಿಭಾಗದ ವತಿಯಿಂದ ರವಿವಾರ ಉಡುಪಿ ಜಾಮೀಯ ಮಸೀದಿಯಲ್ಲಿ ಆಯೋಜಿಸಲಾದ ಸಮುದಾಯಿಕ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಇಸ್ಮಾಮಿನ ಪರಿಚಯದ ಜೊತೆಗೆ ಮುಸ್ಲಿಮರ ಸರಿಯಾದ ಪರಿಚಯವೂ ಅಗಬೇಕಾಗಿದೆ. ಮಾನವೀಯ ಮೌಲ್ಯ ಅಭಿವೃದ್ಧಿ ಪಡಿಸಬೇಕು. ಕೋಮುವಾದಿ ಅಥವಾ ಸ್ವಜನ ಪಕ್ಷಪಾತ ಸತ್ಯವಾಹಕರ ಶೋಭೆಯಲ್ಲ. ನಕಾರಾತ್ಮತೆಗೂ ಸಕಾರಾತ್ಮಕ ಪ್ರತಿಕ್ರಿಯೆ ಸತ್ಯ ಸಾಕ್ಷ ನೀಡುವವನ ವಿಶೇಷತೆಯಾಗಿರಬೇಕು. ಸಮಾಜದಿಂದ ಪ್ರತ್ಯೇಕವಾಗಿರಲು ಸಾಧ್ಯವೇ ಇಲ್ಲ. ನಾವು ಸಮಾಜದ ಅವಿ ಭಾಜ ಅಂಗ. ನಮ್ಮ ಪರಿಚಯ ಅತ್ಯುತ್ತಮ ಸಮುದಾಯವಾಗಿ ಆದ್ಯತೆಯ ನೆಲೆಯಲ್ಲಾಗಬೇಕು ಎಂದರು.
ಶಾಂತಿ, ಮಾನವೀಯತೆ ಮತ್ತು ನ್ಯಾಯದ ವ್ಯವಸ್ಥೆಯೇ ಪ್ರಮುಖ ವಿಷಯ ಆಗಬೇಕು. ಇದು ಘೋಷಣೆ ಅಲ್ಲ. ಜೀವನದ ಕರ್ತವ್ಯ. ಇತರರು ಇತರ ಎಲ್ಲಾ ರಂಗಗಳ ಪ್ರಾವೀಣ್ಯರಾಗಿರಬಹುದು. ಆದರೆ ನಮ್ಮ ಈ ಶಕ್ತಿ ಇತರೆಲ್ಲರ ಮೇಲೆ ಮೇಲ್ಮೈ ಸಾಧಿಸಬೇಕು. ಆಗಲೇ ಸಮಾಜದ ನಿರ್ಮಾಣ ಸಾಧ್ಯ. ಕೆಡುಕಿನ ವಾಹಕರು ಆಕ್ರಮಣಕಾರಿ ಮತ್ತು ವಿಶ್ರಮರಹಿತರಾಗಿ ವ್ಯಾಪಿಸುತ್ತಿರು ವಾಗ ಒಳಿತಿನ ವಾಹಕರ ಹೊಣೆಗಾರಿಕೆ ಸಂಕೀರ್ಣವಾಗಿ ವೃದ್ಧಿಸುತ್ತದೆ ಎಂದು ಅವರು ತಿಳಿಸಿದರು.
ಸಧ್ಬಾವನಾ ವೇದಿಕೆ ಕರ್ನಾಟಕ ಇದರ ರಾಜ್ಯಾಧ್ಯಕ್ಷ ಅಕ್ಬರ್ ಅಲಿಯವರು ಮಾತನಾಡಿದರು. ವಲಯ ಸಂಚಾಲಕ ಅಬ್ದುಸ್ಸಲಾಮ್ ಉಪ್ಪಿನಂಗಡಿ ಸ್ವಾಗತಿಸಿದರು.