ವಿದೇಶಿ ಪ್ರವಾಸಿಗರಿಗೆ ಉಚಿತ ಸಿಮ್ ಕಾರ್ಡ್ ಪೂರೈಕೆ ರದ್ದು
Update: 2018-07-09 21:28 IST
ಹೊಸದಿಲ್ಲಿ, ಜು. 9: ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗಳಿಗೆ ಸಂವಹನ ಅಗತ್ಯತೆ ಪೂರೈಸಲು ಉಚಿತ ಸಿಮ್ ಕಾರ್ಡ್ ಒದಗಿಸುವ ಯೋಜನೆ ರದ್ದುಗೊಳಿಸಲಾಗಿದೆ ಎಂದು ಪ್ರವಾಸೋದ್ಯಮ ಕಾರ್ಯದರ್ಶಿ ರಶ್ಮಿ ವರ್ಮಾ ಸೋಮವಾರ ಹೇಳಿದ್ದಾರೆ. ವೀಸಾ ಪಡೆದುಕೊಂಡು ಭಾರತಕ್ಕೆ ಆಗಮಿಸುವ ವಿದೇಶಿ ಪ್ರವಾಸಿಗರು ಈ ಯೋಜನೆ ಅಡಿಯಲ್ಲಿ ಪ್ರಿ-ಆ್ಯಕ್ಟಿವೇಟೆಡ್ ಉಚಿತ ಸಿಮ್ ಪಡೆದುಕೊಳ್ಳುತ್ತಿದ್ದರು. ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಕಳೆದ ವರ್ಷ ಫೆಬ್ರವರಿಯಲ್ಲಿ ಈ ಯೋಜನೆ ಆರಂಭಿಸಿದ್ದರು.
‘‘ಇದರ ಅಗತ್ಯತೆ ಇಲ್ಲದೇ ಇರುವುದರಿಂದ ಈ ಯೋಜನೆ ರದ್ದುಗೊಳಿಸಲಾಗಿದೆ’’ ಎಂದು ವರ್ಮಾ ಹೇಳಿದ್ದಾರೆ. 50 ರೂ. ಟಾಕ್‌ಟೈಮ್ ಹಾಗೂ 50 ಎಂಬಿ ಡಾಟಾ ಇರುವ ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್‌ಗಳನ್ನು ವಿದೇಶಿ ಪ್ರವಾಸಿಗರಿಗೆ ಒದಗಿಸಲಾಗುತ್ತಿತ್ತು. ಭಾರತಕ್ಕೆ ಆಗಮಿಸಿದ ಬಳಿಕ ಅವರ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಆಗುವ ವರೆಗಿನ ಅವಧಿಯಲ್ಲಿ ಸಂಪರ್ಕಕ್ಕೆ ನೆರವು ನೀಡಲು ಈ ಸೌಲಭ್ಯ ಆರಂಭಿಸಲಾಗಿತ್ತು.