ಮಹಿಳೆಯ ಜನನಾಂಗ ಛೇದನ ನಿಷೇಧ: ಕೇಂದ್ರದ ಕೋರಿಕೆಗೆ ಸುಪ್ರೀಂ ಸಮ್ಮತಿ
Update: 2018-07-09 21:32 IST
ಹೊಸದಿಲ್ಲಿ, ಜು. 9: ಮಹಿಳೆ ಜನನಾಂಗ ಛೇದನ ನಿಷೇಧಿಸುವಂತೆ ಕೇಂದ್ರ ಸರಕಾರ ಸೋಮವಾರ ಕೋರಿದ್ದು, ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಮಹಿಳೆ ಜನನಾಂಗ ಛೇದನವನ್ನು ತಾನು ವಿರೋಧಿಸುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್, ಧಾರ್ಮಿಕ ಆಚರಣೆಗಳಿಗೆ ಯಾರೊಬ್ಬರೂ ಮಹಿಳೆಯ ದೇಹವನ್ನು ಬಳಕೆ ಮಾಡಿಕೊಳ್ಳಬಾರದು ಹಾಗೂ ಆಕೆಯ ದೇಹ ಭಾಗದ ಸಮಗ್ರತೆ ಉಲ್ಲಂಘಿಸಬಾರದು ಎಂದಿದೆ.
ಶಿಯಾ ಪಂಥದ ದಾವೂದಿ ಬೋಹ್ರಾ ಸಮುದಾಯದಲ್ಲಿ ಅಸ್ತಿತ್ವದಲ್ಲಿರುವ ಈ ಮಹಿಳೆಯ ಜನನಾಂಗ ಛೇದನ ಸಂಪ್ರದಾಯ ಅಪರಾಧ ಹಾಗೂ ಶಿಕ್ಷಾರ್ಹ. ಇದು ಈ ಸಮುದಾಯದಲ್ಲಿ ಅನುಸರಿಸುತ್ತಿರುವ ಹಳೆಯ ಸಂಪ್ರದಾಯ. ಮಹಿಳೆಯ ಜನನಾಂಗ ಛೇದನದ ಧಾರ್ಮಿಕ ಸಂಪ್ರದಾಯ ನಿಷೇಧಿಸಲು ಸರಕಾರ ಒಲವು ಹೊಂದಿದೆ ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.